ಚೀನಾ, ಸೆ. ೧೬: ಚೀನಾದಲ್ಲಿ ನಡೆಯುತ್ತಿರುವ ಏಷಿಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿಯಲ್ಲಿ ಹಾಲಿ ಚಾಂಪಿಯನ್ ಭಾರತವು ಸೆಮಿಫೈನಲ್‌ನಲ್ಲಿ ಕೊರಿಯಾ ವಿರುದ್ಧ ೪-೧ ಗೋಲುಗಳ ಮೂಲಕ ಫೈನಲ್ ಪ್ರವೇಶಿಸಿದೆ. ಗ್ರೂಪ್ ಹಂತದಲ್ಲಿ ಪಾಕಿಸ್ತಾನ, ಚೀನಾ, ಕೊರಿಯಾ, ಮಲೇಷಿಯಾ ಹಾಗೂ ಜಪಾನ್ ವಿರುದ್ಧ ಗೆಲುವು ಸಾಧಿಸಿದ ಭಾರತ ಗ್ರೂಪ್‌ನಲ್ಲಿ ಮೊದಲ ಸ್ಥಾನ ಗಳಿಸಿತ್ತು. ೪ನೇ ಸ್ಥಾನ ಪಡೆದಿದ್ದ ಕೊರಿಯಾ ವಿರುದ್ಧ ಇಂದು ನಡೆದ ಸೆಮಿಫೈನಲ್‌ನಲ್ಲಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ೩ ಹಾಗೂ ೨ನೇ ಸ್ಥಾನದಲ್ಲಿದ್ದ ಚೀನಾ ಹಾಗೂ ಪಾಕಿಸ್ತಾನ ಎದುರಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ ಚೀನಾ ಗೆಲುವು ಸಾಧಿಸಿತು. ಭಾರತ ಹಾಗೂ ಚೀನಾ ನಡುವಿನ ಫೈನಲ್ ತಾ. ೧೭ ರಂದು (ಇಂದು) ಮಧ್ಯಾಹ್ನ ೩:೩೦ಕ್ಕೆ ನಡೆಯಲಿದೆ.