ಕುಶಾಲನಗರ, ಸೆ. ೧೫: ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದ ಪ್ರೌಢಶಾಲೆಯ ಬಳಿ ಶುಂಠಿ ಚೀಲ ತುಂಬಿದ ಎತ್ತಿನಗಾಡಿ ಮಗುಚಿ ಬಿದ್ದು ಬಾಲಕನೊಬ್ಬ ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ.

ಭಾನುವಾರ ಬೆಳಿಗ್ಗೆ ತಮ್ಮ ಮನೆಯ ಬಳಿ ಶುಂಠಿ ಚೀಲಗಳನ್ನು ತುಂಬಿ ನಿಲ್ಲಿಸಿದ್ದ ಎತ್ತಿನ ಗಾಡಿಯು ಬಿದ್ದ ಅವಘಡದಿಂದ ಎರಡನೇ ತರಗತಿ ವಿದ್ಯಾರ್ಥಿ ತರುಣ್ (೭) ಮೃತಪಟ್ಟಿದ್ದಾನೆ.

ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದ ತರುಣ್, ತಮ್ಮ ಮನೆಯ ಅಂಗಳದಲ್ಲಿ ಬೆಳಿಗ್ಗೆ ೭.೩೦ರ ವೇಳೆಯಲ್ಲಿ ಶುಂಠಿ ತುಂಬಿದ್ದ ಎತ್ತಿನ ಗಾಡಿಯ ಹಿಂಬದಿಯು ಭಾರ ಹೆಚ್ಚಾಗಿ ಗಾಡಿಯು ಮಗುಚಿಬಿದ್ದಾಗ ಗಾಡಿ ಬಳಿ ನಿಂತಿದ್ದ ವಿದ್ಯಾರ್ಥಿ ತರುಣ್ ತಲೆಗೆ ತೀವ್ರಪೆಟ್ಟಾಗಿ ರಕ್ತಸ್ರಾವವಾಗಿದ್ದು, ತಕ್ಷಣದಲ್ಲಿ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ತೆರಳಿ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಮೃತ ದುರ್ದೈವಿ ವಿದ್ಯಾರ್ಥಿ ತರುಣ್, ತೊರೆನೂರು ಗ್ರಾಮ ನಿವಾಸಿ ಮಧು ಮತ್ತು ಅನು ದಂಪತಿಯ ಪುತ್ರ. ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.