ಮಡಿಕೇರಿ, ಸೆ. ೧೫: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಸಿ ಮತ್ತು ಡಿ ಲ್ಯಾಂಡ್ ಒತ್ತುವರಿ ತೆರವು, ಸೆಕ್ಷನ್ ೪ ರಡಿ ಅಧಿಸೂಚಿತ ಜಾಗಗಳನ್ನು ಮೀಸಲು ಅರಣ್ಯವಾಗಿ ಪರಿವರ್ತಿಸುವ ಪ್ರಸ್ತಾಪ ಹಾಗೂ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಸರ್ವಪಕ್ಷ ಹಾಗೂ ಈ ಬಗ್ಗೆ ಹೋರಾಡುತ್ತಿರುವ ಸಂಘ-ಸAಸ್ಥೆಗಳ ಪ್ರಮುಖರು, ಮಾಜಿ ಶಾಸಕರು, ಜನಪ್ರತಿನಿಧಿಗಳ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಬAಧಪಟ್ಟ ಸಚಿವರನ್ನು ಭೇಟಿಯಾಗಿ ಗಮನ ಸೆಳೆದು ಸಮಸ್ಯೆ ಬಗೆಹರಿಸುವ ಪ್ರಯತ್ನ ಹಾಗೂ ಅನಿವಾರ್ಯ ಪರಿಸ್ಥಿತಿ ಎದುರಾದಲ್ಲಿ ಕಾನೂನಾತ್ಮಕ ಹೋರಾಟ ನಡೆಸಿ ನ್ಯಾಯ ಪಡೆದುಕೊಳ್ಳುವಂತೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಗೊಂಡಿತು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸಿ-ಡಿ ಲ್ಯಾಂಡ್ ಒತ್ತುವರಿ ತೆರವು, ಮೀಸಲು ಅರಣ್ಯ ಪ್ರಸ್ತಾಪ, ಕಸ್ತೂರಿ ರಂಗನ್ ವರದಿ, ಪಾರಂಪರಿಕ ವನ್ಯಜೀವಿ ಉತ್ಪನ್ನ ಹಿಂದಿರುಗಿಸುವ ವಿಚಾರವಾಗಿ ಸುದೀರ್ಘ ಚರ್ಚೆಗಳು ನಡೆದವು. ಕಾನೂನಿನ ಅಂಶಗಳ ಕುರಿತು ಪೊನ್ನಣ್ಣ ಸ್ಪಷ್ಟವಾಗಿ ತಿಳಿಸಿದರು. ಕಾಂಗ್ರೆಸ್-ಬಿಜೆಪಿ ಪಕ್ಷಗಳ ಜಿಲ್ಲಾಧ್ಯಕ್ಷರು, ಪರಿಸರವಾದಿ, ರೈತ ಸಮಿತಿ ಹೋರಾಟಗಾರರು ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆಗಳ ಸಾಧಕ-ಬಾಧಕ ವಿವರಿಸಿದರು. ಶಾಸಕರುಗಳಿಂದ ಸಕರಾತ್ಮಕ ಸ್ಪಂದನ ವ್ಯಕ್ತವಾಗಿ ಪಕ್ಷಾತೀತವಾಗಿ ಸರಕಾರದ ಗಮನ ಸೆಳೆಯುವ ಬಗ್ಗೆ ಒಮ್ಮತ್ತದ ತೀರ್ಮಾನಕ್ಕೆ ಬರಲಾಯಿತು.
ಅರಣ್ಯ ಒತ್ತುವರಿ ಪ್ರಕರಣ ಇತ್ಯರ್ಥ ಅಸಾಧ್ಯ - ಪೊನ್ನಣ್ಣ
ಈಗಾಗಲೇ ಅರಣ್ಯ ಎಂದು ಘೋಷಿಸಲ್ಪಟ್ಟಿರುವ ಪ್ರದೇಶವನ್ನು ಒತ್ತುವರಿ ಮಾಡಿಕೊಂಡರೆ ಅದನ್ನು ಒತ್ತುವರಿ ಮಾಡಿಕೊಂಡವರಿಗೆ ನೀಡುವುದು ಅಸಾಧ್ಯ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸ್ಪಷ್ಟವಾಗಿ ತಿಳಿಸಿದರು.
ಉಳಿದಂತೆ ಸಿ-ಡಿ ಲ್ಯಾಂಡ್ ವಿಚಾರ, ಮೀಸಲು ಅರಣ್ಯ ಪ್ರಸ್ತಾಪ, ಕಸ್ತೂರಿ ರಂಗನ್ ವರದಿಗೆ ಆಕ್ಷೇಪ ಸಲ್ಲಿಸಲು ಎಲ್ಲಾ ರೀತಿಯ ಅವಕಾಶಗಳಿದ್ದು, ಈ ಕುರಿತು ಪಕ್ಷಾತೀತವಾಗಿ ಸರಕಾರದ ಗಮನ ಸೆಳೆಯಬೇಕಾಗಿದೆ. ಸೆಕ್ಷನ್ ೪ ರಡಿ ಒತ್ತುವರಿ ತೆರವು ವಿಚಾರವಾಗಿ ೩ ಎಕರೆ ತನಕ ಜಾಗವನ್ನು ಮುಟ್ಟುಗೋಲು ಹಾಕದಂತೆ ಶಿಫಾರಸ್ಸು ಮಾಡಲಾಗಿದೆ. ಸಿ-ಡಿ ‘ಕ್ಲಾಸಿಫಿಕೇಷನ್ ಲ್ಯಾಂಡ್’ ಆಗಿದ್ದು, ಕಾನೂನಾತ್ಮಕ ಸಂಘರ್ಷಗಳಿರುವುದು ಸತ್ಯವಾದ ವಿಚಾರ. ಸರಕಾರ ಮಧ್ಯಪ್ರವೇಶಿಸಿ ನ್ಯಾಯಾಲಯದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿ ‘ರಿವ್ಯೂ ಪಿಟೀಷನ್’ ಕೂಡ ಸಲ್ಲಿಸಿದೆ. ಸಿ-ಡಿ ಲ್ಯಾಂಡ್ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆಗೊಳ್ಳುವ ಪೂರ್ಣ ವಿಶ್ವಾಸವಿದೆ. ನ್ಯಾಯಾಂಗ ಹೋರಾಟದ ಮೂಲಕ ಮರಳಿ ಸರಕಾರ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಅಚಲ ವಿಶ್ವಾಸವನ್ನು ಪೊನ್ನಣ್ಣ ವ್ಯಕ್ತಪಡಿಸಿದರು.
ಸೆಕ್ಷನ್ ೪ ರಡಿ ಮೀಸಲು ಅರಣ್ಯ ಪ್ರಸ್ತಾಪ ವಿಚಾರ ಗೊಂದಲ ಸೃಷ್ಟಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಈ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಸಾಧಕ-ಬಾಧಕ ಅರಿತುಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಮೂಲಕ ಈ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆ ಈ ಪ್ರಸ್ತಾಪದಡಿ ಬರುವವರು ವ್ಯವಸ್ಥಾಪನಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದರು.
ವನ್ಯಜೀವಿ ಉತ್ಪನ್ನ ಘೋಷಣೆಗೆ ಅವಕಾಶದ ಚರ್ಚೆ
ಪಾರಂಪರಿಕವಾಗಿ ಬಂದ ವನ್ಯಜೀವಿ ಉತ್ಪನ್ನಗಳನ್ನು ಸರಕಾರದ ಸ್ವಾಧೀನಕ್ಕೆ ನೀಡುವ ವಿಚಾರದ ಕುರಿತು ಕೇಂದ್ರ ಸರಕಾರ ನಿರ್ಣಯ ಕೈಗೊಳ್ಳಬೇಕಾಗಿದೆ. ಆದರೆ, ಪಾರಂಪರಿಕ ಉತ್ಪನ್ನಗಳನ್ನು ಘೋಷಣೆ ಮಾಡಿಕೊಳ್ಳಲು ಮತ್ತೆ ಅವಕಾಶ ನೀಡುವ ಪ್ರಕ್ರಿಯೆ ಕುರಿತ ಚರ್ಚೆ ಸರಕಾರದ ಮುಂದಿದೆ ಎಂದು ಎ.ಎಸ್. ಪೊನ್ನಣ್ಣ ಹೇಳಿದರು.
ರಾಜ್ಯದ ಅರಣ್ಯ ಸಚಿವರಿಗೆ ಈ ವಿಚಾರದ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಇದರಲ್ಲಿ ಕೇಂದ್ರದ ಪಾತ್ರ ಮುಖ್ಯವಾಗಿದ್ದು, ಸಂಸದರು ಈ ಬಗ್ಗೆ ಹೆಚ್ಚಿನ ಒತ್ತಡವನ್ನು ಕೇಂದ್ರ ಸರಕಾರಕ್ಕೆ ಹಾಕಬೇಕು ಎಂದರು.
ಪಕ್ಷಾತೀತವಾಗಿ ಒಂದಾಗೋಣ - ಮಂತರ್
ವಿವಿಧ ವಿಚಾರಗಳಿಂದ ಬಾಧಿತವಾಗುತ್ತಿರುವ ಕೊಡಗು ಜಿಲ್ಲೆಯ ಜನರ ಪರ ಸಂಘಟನಾತ್ಮಕ ನಡೆ ಅನುಸರಿಸುವುದರಿಂದ ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಹಾಗೂ ಪಕ್ಷಾತೀತವಾಗಿ ಒಂದಾಗುವುದರಿAದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪ್ರತಿಪಾದಿಸಿದರು.
ಸಿ-ಡಿ ಲ್ಯಾಂಡ್ ವಿಚಾರವಾಗಿ ಅರಣ್ಯ ಸಚಿವರನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಮೂಲಕ ಇದಕ್ಕೆ ತಾರ್ಕಿಕ ಅಂತ್ಯ ಕೊಡಬೇಕಾಗಿದೆ. ನ್ಯಾಯಾಂಗದ ಮೂಲಕ ಪರಿಹಾರ ದೊರೆಯುವ ವಿಶ್ವಾಸ ಹೊಂದಿದ್ದೇವೆ. ಸೆಕ್ಷನ್ ೪ ರಡಿ ಮೀಸಲು ಅರಣ್ಯ ವಿಚಾರವಾಗಿ ಸುಪ್ರೀಂ ಕೋರ್ಟ್ ವ್ಯವಸ್ಥಾಪನಾಧಿಕಾರಿ ಹುದ್ದೆ ಸೃಷ್ಟಿಸಿದೆ. ಇದರ ಭಾಗವಾಗಿ ಪ್ರಕ್ರಿಯೆಗಳು ನಡೆಯುತ್ತಿರುವುದು ತಿಳಿದು ಬಂದಿದೆ. ಇದರಲ್ಲಿಯೂ ಅನೇಕ ತಾಂತ್ರಿಕ ಸಮಸ್ಯೆಗಳಿವೆ. ಸಿ-ಡಿ ಲ್ಯಾಂಡ್ ಅಧಿಸೂಚಿತ ಜಾಗ ಎಂದು ಬದಲಾಗಿರುವ ಉದಾಹರಣೆಗಳಿವೆ. ಸೆಕ್ಷನ್ ೪ ರಡಿ ಅಧಿಸೂಚಿತ ಜಾಗದಲ್ಲಿ ಮೀಸಲು ಅರಣ್ಯ ಮಾಡಬೇಕೆಂಬ ಪ್ರಸ್ತಾಪವಿದೆ. ಸೆಕ್ಷನ್ ೫ ರಡಿ ಹುದ್ದೆ ನೀಡಲಾಗಿದೆ. ಮುಂದೆ ಬಾಧಿತರು ಸೂಕ್ತ ದಾಖಲೆ ನೀಡಬಹುದು. ಆಕ್ಷೇಪಣೆಯನ್ನೂ ಸಲ್ಲಿಸಬಹುದಾಗಿದೆ ಎಂದು ವಿವರಿಸಿದರು.
ದೊಡ್ಡಮಟ್ಟದ ಒತ್ತುವರಿಯನ್ನು ಅಧಿಕಾರಿಗಳು ತೆರವು ಮಾಡದೆ ಸಣ್ಣ ರೈತರು ಭೂಮಿಗೆ ಕೈ ಹಾಕಿರುವುದು ಸರಿಯಲ್ಲ. ಈ ಕುರಿತು ಸಂಘಟನಾತ್ಮಕ ಹೋರಾಟದ ಜೊತೆಗೆ ಕಾನೂನಾತ್ಮಕ ಹೋರಾಟವೂ ಅಗತ್ಯವಾಗಿದ್ದು, ಈ ನಿಟ್ಟಿನ ಪ್ರಯತ್ನಕ್ಕೆ ತನ್ನ ಸಹಕಾರ ಸದಾ ಇರಲಿದೆ ಎಂದು ಭರವಸೆಯ ನುಡಿಗಳನ್ನಾಡಿದರು.
ಮಾರಕ ಯೋಜನೆಗಳ ವಿರುದ್ಧ ಧ್ವನಿಯಾಗೋಣ - ಸುಜಾ ಕುಶಾಲಪ್ಪ
ಜಿಲ್ಲೆಗೆ ಮಾರಕವಾಗಿರುವ ಯೋಜನೆಗಳ ವಿರುದ್ಧ ಎಲ್ಲಾ ಪಕ್ಷದ ಪ್ರತಿನಿಧಿಗಳು ಧ್ವನಿಯಾಗಿ ಹೋರಾಡೋಣ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಕರೆ ನೀಡಿದರು.
ಜನವಿರೋಧಿ ನೀತಿಗಳು ಯಾವುದೇ ಪಕ್ಷ ತಂದರೂ ಸ್ಥಳೀಯ ಜನಪ್ರತಿನಿಧಿಗಳಾಗಿರುವ ನಾವು ಜನರ ನೋವಿಗೆ ಸ್ಪಂದಿಸಬೇಕು. ಜನಹಿತ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನನ್ನ ಸಹಕಾರ ಎಂದಿಗೂ ಇರಲಿದೆ. ಎಲ್ಲರನ್ನೂ ಸೇರಿಸಿಕೊಂಡು ಮುನ್ನಡೆಯುವುದರಿಂದ ಬೇಡಿಕೆಗಳ ಈಡೇರಿಸಲು ಶಕ್ತಿ ಬಂದAತಾಗುತ್ತದೆ ಎಂದ ಅವರು, ವನ್ಯಜೀವಿ ಮಾನವ ಸಂಘರ್ಷ ತಡೆಗೆ ರೂ. ೫೦೦ ಕೋಟಿ ಅನುದಾನ ತರಬೇಕಾಗಿದೆ ಎಂದರು.
ಭೂಮಿ ಒಡೆತನ ನೀಡಿ - ಹೋರಾಟಗಾರರ ಬೇಡಿಕೆ
ಸಂವಾದದಲ್ಲಿ ಪಾಲ್ಗೊಂಡಿದ್ದ ರೈತಪರ ಹೋರಾಟಗಾರರು ಹಲವು ವರ್ಷಗಳಿಂದ ಸಿ-ಡಿ ಲ್ಯಾಂಡ್, ಸರಕಾರಿ ಜಾಗದಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸಣ್ಣ ರೈತರನ್ನು ಒಕ್ಕಲೆಬ್ಬೆಸುವ ಪ್ರಯತ್ನ ನಡೆಸಬಾರದು. ಜಿಲ್ಲೆಯ ಶಾಸಕರು ಜಿಲ್ಲೆಯ ರೈತರ ಸಹಾಯಕ್ಕೆ ನಿಲ್ಲಬೇಕೆಂಬ ಬೇಡಿಕೆ ಮುಂದಿಟ್ಟರು.
ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ನೂರಾರು ಎಕರೆ ಭೂಮಿ ಒತ್ತುವರಿ ಮಾಡಿದ ಖಾಸಗಿ ಸಂಸ್ಥೆಗಳಿAದ ಮೊದಲು ಒತ್ತುವರಿ ತೆರವುಗೊಳಿಸುವ ಕೆಲಸವಾಗಬೇಕು. ರಾಜ್ಯದ ಅರಣ್ಯ ಮಂತ್ರಿಗಳ ನಿರ್ಧಾರ ಜಿಲ್ಲೆಯ ಜನರನ್ನು ಪೇಚಿಗೆ ಸಿಲುಕಿಸುವಂತೆ ಮಾಡುತ್ತಿದೆ. ಒಕ್ಕಲೆಬ್ಬೆಸುವ ಪ್ರಯತ್ನ ನಡೆದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸೋಮವಾರಪೇಟೆ ತಾಲೂಕು ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ. ಸುರೇಶ್ ಮಾತನಾಡಿ, ಜಂಟಿ ಸರ್ವೆ ನಡೆಸದ ಪರಿಣಾಮ ಇದೀಗ ಸಿ-ಡಿ ಲ್ಯಾಂಡ್ ವಿವಾದ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಶೇ ೬೬ ಅರಣ್ಯ ಪ್ರದೇಶವಿದ್ದು, ಮತ್ತಷ್ಟು ಹೆಚ್ಚಿಸಿದರೆ ಜನಸಾಮಾನ್ಯರ ಸ್ಥಿತಿ ಏನು ಎಂದು ಪ್ರಶ್ನಿಸಿದ ಅವರು, ಇದನ್ನು ಮರುಪರಿಶೀಲಿಸಿ ಸಣ್ಣ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ರೈತ ಹೋರಾಟ ಸಮಿತಿ ಸಂಚಾಲಕÀ ಮಿಥುನ್ ಹರಗ ಮಾತನಾಡಿ, ಮಳೆ ಬಂದರೂ, ಬರದಿದ್ದರೂ ಕೊಡಗಿನ ಕಡೆ ಇತರೆ ಜಿಲ್ಲೆಯ ಜನರು, ಸರಕಾರ ಬೊಟ್ಟು ಮಾಡುತ್ತಿದೆ. ಹವಾಮಾನ ವೈಪರಿತ್ಯಕ್ಕೆ ವೈಜ್ಞಾನಿಕ ಅಂಶಗಳು ಬೇರೆ ಇವೆ. ಆದರೆ, ರೈತರ ಭೂಮಿಯನ್ನು ಕಸಿದು ಅರಣ್ಯ ಮಾಡಬೇಕೆಂಬ ಸರಕಾರದ ನಿಲುವು ಸರಿಯಲ್ಲ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಜಿಲ್ಲೆಯ ಜನ ಇಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಪರಿಸರವಾದಿ ತಮ್ಮು ಪೂವಯ್ಯ ಮಾತನಾಡಿ, ದೇವರಕಾಡು ಸಂರಕ್ಷಣೆ ನಿಟ್ಟಿನಲ್ಲಿ ಬ್ರಿಟಿಷ್ ಸರಕಾರವೇ ಕೆಲವೊಂದು ಹಕ್ಕನ್ನು ನೀಡಿತ್ತು. ಅದನ್ನು ಉಳಿಸುವ ಕೆಲಸವಾಗಬೇಕು. ಜಿಲ್ಲೆಯಲ್ಲಿ ಅರಣ್ಯ ನಾಶಕ್ಕೆ ಅಧಿಕಾರಿಗಳು ಕಾರಣರಾಗುತ್ತಿದ್ದಾರೆ. ಸಿ & ಡಿ ಲ್ಯಾಂಡ್ ರಕ್ಷಣೆ ಉದ್ದೇಶವನ್ನು ಜನ ತಿಳಿಯಬೇಕು. ಪರಿಸರ ಉಳಿವು ಅತ್ಯವಶ್ಯ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಸ್ವಾಗತಿಸಿ, ಖಜಾಂಜಿ ಆನಂದ್ ಕೊಡಗು ವಂದಿಸಿದರು.