ವೀರಾಜಪೇಟೆ, ಸೆ. ೧೪: ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ನಿವಾಸಿ ನಿರ್ಮಲಗಿರಿಯ ಥೋಮಸ್ ಅವರ ಪುತ್ರ ಶಾಜಿ (೪೮) ಎಂಬವರನ್ನು ತೋಟದ ಮಾಲೀಕರು ಕಣ್ಣಿಗೆ ಕ್ಲೋರೋಫಾಮ್ ಸಿಂಪಡಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿ ಮಾಕುಟ್ಟ ಬಳಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಮಾಕುಟ್ಟ ಚೆಕ್‌ಪೋಸ್ಟ್ ಪೊಲೀಸ್ ಠಾಣೆಯ ಸಮೀಪ ಶಾಜಿಯನ್ನು ಕಾರಿನಿಂದ ಹೊರದಬ್ಬಿದ ಘಟನೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಾಜಿ ಅವರು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ತೀವ್ರತÀರಹದ ಹಲ್ಲೆಯಿಂದ ಕೈ ಮುರಿತ ಹಾಗೂ ಎರಡು ಕಾಲುಗಳಿಗೆ ಘಾಸಿಯಾಗಿರುವುದಾಗಿ ಹೇಳಲಾಗಿದೆ.

ವೀರಾಜಪೇಟೆ ಹೊರವಲಯದ ಬೂದಿಮಾಳ ಎಂಬಲ್ಲಿ ಕೇರಳ ರಾಜ್ಯದ ಕೋಟಾಯಂನ ಪಾಂಬಾಡಿ ನಿವಾಸಿ ಅಭಿನ್ ಎಂಬವರು ಸುಮಾರು ನಾಲ್ಕು ಎಕರೆ ಕಾಫಿ ತೋಟವನ್ನು ಹೊಂದಿದ್ದು ಶಾಜಿ ಹಾಗೂ ಅವರ ಪತ್ನಿ ಆ ತೋಟದಲ್ಲಿ ಮಕ್ಕಳ ಜೊತೆಯಲ್ಲಿ ನೆಲೆಸಿದ್ದಾರೆ. ಪತಿ ಮತ್ತು ಪತ್ನಿ ನಡುವೆ ಇರುವ ವೈಷಮ್ಯದಿಂದ ಈ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ಹೆಗ್ಗಳ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಜಿಯನ್ನು ಕೇರಳ ರಾಜ್ಯದ ನೋಂದಣಿ ಹೊಂದಿರುವ ಕಾರಿನಲ್ಲಿ ಬಂದವ್ಯಕ್ತಿಗಳು ಅಡ್ಡಗಟ್ಟಿ ಅವರನ್ನು ಕಾರಿನಲ್ಲಿ ಅಪಹರಿಸಿ ಈ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ತೋಟದ ಮಾಲೀಕರು ಕೇರಳ ರಾಜ್ಯದ ಕೆಲವು ವ್ಯಕ್ತಿಗಳ ಜೊತೆಗೂಡಿ ಈ ಕೃತ್ಯ ನಡೆಸಿದ್ದಾರೆ ಎಂದು ಶಾಜಿ ಆಸ್ಪತ್ರೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಲ್ಲೆ ನಡೆದ ಘಟನೆಯನ್ನು ಕಂಡ ಕೆಲವು ವ್ಯಕ್ತಿಗಳು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

ಹಲ್ಲೆ ನಡೆಸಿದ ತಂಡ ಗಡಿ ಭಾಗದ ಚೆಕ್ ಪೋಸ್ಟ್ಗೆ ಡಿಕ್ಕಿಪಡಿಸಿ ಕೇರಳ ರಾಜ್ಯದ ಕಡೆಗೆ ತೆರಳಿ ನಾಪತ್ತೆಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವೀರಾಜಪೇಟೆ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ಮುಂದುವರೆಸಿದ್ದಾರೆ.