ವೀರಾಜಪೇಟೆ, ಸೆ. ೧೫: ಮಕ್ಕಳು ಶಿಕ್ಷಣ ಪಡೆಯಲು ಜ್ಞಾನ ದೇಗುಲಕ್ಕೆ ಆಗಮಿಸುತ್ತಾರೆ. ಎಲ್ಲಾ ಮಕ್ಕಳನ್ನು ಒಂದೇ ರೀತಿಯಲ್ಲಿ ಕಂಡು ಉತ್ತಮ ಬೋಧನೆ ನೀಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬಹುದು ಎಂದು ದೇವಣಗೇರಿ ಬಿ.ಸಿ. ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬೀನಂಡ ಎಸ್. ಪೂಣಚ್ಚ ಅವರು ಹೇಳಿದರು.
ಲಯನ್ಸ್ ಕ್ಲಬ್ ವೀರಾಜಪೇಟೆ ವತಿಯಿಂದ ರೋಟರಿ ಶಾಲೆಯ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪೂಣಚ್ಚ ಅವರು ಪೌರಾಣಿಕ ಹಿನ್ನೆಲೆಯಲ್ಲಿ ಗುರುಕುಲಗಳು ಉದಯವಾಗಿತ್ತು. ಗುರುಕುಲದ ಶಿಕ್ಷಣ ಮರೆಯಾದ ನಂತರ ಸರ್ಕಾರಿ ಶಾಲೆಗಳು ಆರಂಭವಾಯಿತು. ಸರ್ಕಾರಿ ಶಾಲೆಗಳಿಗೆ ಪೈಪೋಟಿ ನೀಡಲು ಖಾಸಗಿ ಶಾಲೆಗಳು ಅರಂಭವಾಗಿವೆ. ಪೈಪೋಟಿಗಳ ನಡುವೆ ಶಿಕ್ಷಣವು ವ್ಯಾಪಾರದ ವಸ್ತುವಾಗಿ ಮಾರ್ಪಟ್ಟಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಶಿಕ್ಷಣ ಪಡೆದ ವ್ಯಕ್ತಿಯಿಂದ ಶಿಕ್ಷಿತ ಸಮಾಜ ರೂಪುಗೊಳ್ಳಲು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಮೌಲ್ಯಗಳ ಕೊರತೆ ಕಾಣಿಸಿಕೊಂಡಿದೆ ಎಂದರು.
ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧಿಕಾರಿ ಕನ್ನಂಡ ಸುಧಾ ಬೊಳ್ಳಪ್ಪ ಅವರು ಮಾತನಾಡಿ, ಲಯನ್ಸ್ ಸೇವಾ ಸಂಸ್ಥೆಯು ತನ್ನ ಜನಪರ ಕಾರ್ಯದಿಂದ ಹೆಸರುಗಳಿಸಿದೆ. ಕ್ಲಬ್ಗಳು ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಲ್ಲದೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಬೇಕು. ಲಯನ್ಸ್ ಸಂಸ್ಥೆಯು ಸದಸ್ಯರು ನೀಡಿರುವ ದೇಣಿಗೆಯಿಂದ ವಯನಾಡ್ನಲ್ಲಿ ಸಂಭವಿಸಿದ ದುರ್ಘಟನೆಗೆ ಒಂದು ಲಕ್ಷ ಡಾಲರ್ ಹಣ ಸಮಾಜಿಕ ಕಳಕಳಿಯ ಆಧಾರದ ಮೇಲೆ ನೀಡಲಾಗಿದೆ. ಕ್ಲಬ್ ಸದಸ್ಯರು ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ ವಹಿಸಿದಲ್ಲಿ ಮಾತ್ರ ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಹೇಳಿದರು.
ಲಯನ್ಸ್ ಕ್ಲಬ್ ವೀರಾಜಪೇಟೆಯ ಅಧ್ಯಕ್ಷ ಬಿ.ಪಿ. ಗಣಪತಿ ಅವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಪಿ.ಟಿ, ನರೇಂದ್ರ ಅವರು ಕ್ಲಬ್ನಿಂದ ಆಯೋಜಿಸಿದ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಿದರು. ಲ. ಕವಿತಾ ಕಾವೇರಪ್ಪ, ಲ. ಪ್ರಸನ್ನಾ, ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ವೀರಾಜಪೇಟೆಯ ಅಧ್ಯಕ್ಷ ಬಿ.ಪಿ. ಗಣಪತಿ ಸ್ವಾಗತಿಸಿ, ಕಾರ್ಯದರ್ಶಿ ಪಿ.ಟಿ. ನರೇಂದ್ರ ವಂದಿಸಿದರು. ಲಯನ್ಸ್ ಕ್ಲಬ್ ವೀರಾಜಪೇಟೆಯ ಪದಾಧಿಕಾರಿಗಳು, ಸದಸ್ಯರು ಮತ್ತು ವಿವಿಧ ಲಯನ್ಸ್ ಕ್ಲಬ್ನ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.