ಮಡಿಕೇರಿ,ಸೆ.೧೩: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತಾ. ೧೪ ರಂದು ಏರ್ಪಡಿಸಲಾಗಿದ್ದು, ಈ ಸಂದರ್ಭ ಘಟಕದ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಪದಾಧಿಕಾರಗಳನ್ನು ಕಡೆಗಣಿಸಲಾಗಿದೆ ಎಂದು ನಿಕಟಪೂರ್ವ ಅಧ್ಯಕ್ಷ ಪಿ.ಪಿ. ಸುಕುಮಾರ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು; ಮೂರ್ನಾಡು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಸ್ನೇಹಿತರ ವಾಟ್ಸಾö್ಯಪ್ನಲ್ಲಿ ನೋಡಿದ್ದು, ಸೌಜನ್ಯಕ್ಕಾದರೂ ನಿಕಟಪೂರ್ವ ಅಧ್ಯಕ್ಷನಾದ ತನಗೆ ಹಾಗೂ ಪದಾಧಿಕಾರಿಗಳಿಗೆ ಕಳುಹಿಸಿಲ್ಲ. ಕನಿಷ್ಟ ಪಕ್ಷ ಕರೆ ಮಾಡಿಯೂ ತಿಳಿಸಿಲ್ಲ. ಅಧಿಕಾರ ಹಸ್ತಾಂತರ ಮಾಡಬೇಕಾಗಿರುವ ನನ್ನ ಹೆಸರನ್ನು ಅತಿಥಿಗಳ ಪಟ್ಟಿಯಲ್ಲಿ ಹಾಕಿದ್ದು, ಪಿ.ಪಿ. ಸುಕುಮಾರ ಎಂದಿರುವ ಹೆಸರನ್ನು ಕೆ.ಕೆ. ಸುಕುಮಾರ ಎಂದು ಹಾಕಿ ಅವಮಾನ ಮಾಡಲಾಗಿದೆ. ಅತಿ ಹೆಚ್ಚು ಸದಸ್ಯರು ಹಾಗೂ ಸಾಹಿತಿಗಳನ್ನು ಹೊಂದಿರುವ ಮೂರ್ನಾಡು ಹೋಬಳಿಯಲ್ಲಿ ಹಿಂದಿನ ಸಾಲಿನಲ್ಲಿ ತಾಲೂಕು, ಜಿಲ್ಲಾ, ದಾಸ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಷ್ಟು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದರೂ ಈ ರೀತಿಯಾಗಿ ಕಡೆಗಣನೆ ಮಾಡಿರುವದು ಬೇಸರ ತಂದಿದೆ ಎಂದು ಹೇಳಿದ್ದಾರೆ.