ಸಿದ್ದಾಪುರ, ಸೆ. ೧೨: ಕರ್ನಾಟಕ ಕಾಫಿ ರೈತರ ಸಂಘ (ಸಿಐಎಫ್‌ಐ) ಕೊಡಗು ಘಟಕದ ವತಿಯಿಂದ ಕೊಡಗಿನ ರೈತರಿಗೆ ನ್ಯಾಯ ಒದಗಿಸುವ ಸಲುವಾಗಿ ತಾ.೧೩ ರಂದು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಸಂಘಟನೆಯ ಪ್ರಮುಖರಾದ ಐ ಆರ್ ದುರ್ಗಾಪ್ರಸಾದ್ ಹೇಳಿದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರದ ಅವೈಜ್ಞಾನಿಕ ನೀತಿಯಿಂದ ಕೊಡಗಿನ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದು, ರೈತರ ಸಮಸ್ಯೆಗಳನ್ನು ಸರಕಾರಕ್ಕೆ ತಲುಪಿಸುವ ಕಾರ್ಯವನ್ನು ಕರ್ನಾಟಕ ಕಾಫಿ ರೈತ ಸಂಘ ಮಾಡುತ್ತಿದೆ ಎಂದರು.

ಕರ್ನಾಟಕ ಕಾಫಿ ರೈತ ಸಂಘ ಕೊಡಗು ಘಟಕದ ಸಂಚಾಲಕ ಕೆ ಎಚ್ ಹನೀಫ ಮಾತನಾಡಿ ಕಾಡಾನೆ ಹಾವಳಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಬೆಳೆಗಳನ್ನು ನಾಶಮಾಡುತ್ತಿದ್ದು, ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಈ ನಡುವೆ ಹುಲಿ ದಾಳಿಗೆ ರೈತರ ಗೋವುಗಳು ಬಲಿಯಾಗುತ್ತಿವೆ. ಮಂಗಗಳ ಹಾವಳಿಯಿಂದ ಬೆಳೆದ ಫಸಲುಗಳು ಮಣ್ಣುಪಾಲಾಗುತ್ತಿದೆ. ಸರಕಾರವು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಬಾರಿಯ ಭಾರೀ ಮಳೆಗೆ ಕಾಫಿ, ಅಡಿಕೆ ಬೆಳೆಗಳು ಕೊಳೆ ರೋಗಕ್ಕೆ ಒಳಗಾಗಿದೆ, ಸರಕಾರ ಸಮೀಕ್ಷೆ ನಡೆಸಲು ಮುಂದಾಗದೆ, ಬೆಳೆನಾಶಕ್ಕೆ ಸಂಬAಧಿಸಿದAತೆ ಯಾವುದೇ ಪರಿಹಾರಗಳನ್ನು ನೀಡದೇ ಸರಕಾರ ರೈತರನ್ನು ಕಡೆಗಣಿಸಿದೆ ಎಂದರು. ಅಲ್ಲದೆ ಕಾಫಿ ಧಾರಣೆಯಲ್ಲಿ ವ್ಯಾಪ್ತಿಯ ವ್ಯಾಪಾರಿಗಳು ಉತ್ತಮ ಬೆಲೆ ನೀಡದೆ ರೈತರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಂಘಟನೆಯ ಪ್ರಮುಖ ಹೊಸಮನೆ ವಸಂತ್ ಕುಮಾರ್ ಮಾತನಾಡಿ ಸಿ ಮತ್ತು ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಬೇಕೆಂಬ ಆದೇಶದಿಂದ ಕೊಡಗಿನ ೨೭ ಸಾವಿರ ಏಕರೆ ಕೃಷಿ ಭೂಮಿಯನ್ನು ಸರಕಾರಕ್ಕೆ ವರ್ಗಾವಣೆಯಾಗಬೇಕೆಂಬ ಆದೇಶ ನೀಡಿರುವುದು ರೈತ ವಿರೋಧಿಯಾಗಿದ್ದು ಕೂಡಲೇ ಈ ಆದೇಶವನ್ನು ತಡೆ ಹಿಡಿಯಬೇಕೆಂದು ಒತ್ತಾಯಿಸಿದರು. ರೈತರು ಯಾವುದೇ ಪಕ್ಷದೊಂದಿಗೆ ಸೇರದೆ, ರೈತರ ನ್ಯಾಯಕ್ಕಾಗಿ ಹೋರಾಟ ಮಾಡಬೇಕೆಂದರು. ರೈತರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ನ್ಯಾಯ ಖಂಡಿತವಾಗಿ ಸಿಗಲಿದ್ದು, ನೂರಾರು ವರ್ಷಗಳಿಂದ ಕೃಷಿ ನಡೆಸಿಕೊಂಡು ಬರುತ್ತಿದ್ದ ಭೂಮಿಯನ್ನು ಕಸಿದುಕೊಳ್ಳಲು ಯತ್ನಿಸುತ್ತಿರುವ ಸರಕಾರದ ನೀತಿಯನ್ನು ವಿರೋಧಿಸಿ ಜನಾಂದೊಲನಕ್ಕೆ ಮುಂದಾಗಬೇಕೆAದರು.

ಪ್ರಮುಖರಾದ ಉದಯಕುಮಾರ್ ಮಾತನಾಡಿ ಸರಕಾರದ ಮುಕ್ತ ವ್ಯಾಪಾರ ನೀತಿಯಿಂದ ಕೊಡಗಿನ ಕರಿಮೆಣಸಿನ ಬೆಳೆಗೆ ಸೂಕ್ತ ಬೆಲೆ ಸಿಗದಂತಾಗಿದೆ. ಹೊರ ರಾಷ್ಟçಗಳಿಂದ ಕರಿಮೆಣಸನ್ನು ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.