ಗೋಣಿಕೊಪ್ಪಲು, ಸೆ. ೧೨: ಕಾಫಿಯಲ್ಲಿ ಸಮಗ್ರ ಕೀಟ, ರೋಗ ನಿರ್ವಹಣೆ ಹಾಗೂ ಕಾಫಿ ಮಂಡಳಿಯಲ್ಲಿ ಸಿಗುವ ಯೋಜನೆಗಳ ಸೌಲಭ್ಯದ ಕುರಿತು ಕಾಫಿ ಬೋರ್ಡ್ನ ಉಪ ನಿರ್ದೇಶಕಿ ಡಾ. ಶ್ರೀದೇವಿ ರೈತರಿಗೆ, ಬೆಳೆಗಾರರಿಗೆ ಉಪಯುಕ್ತ ಮಾಹಿತಿ, ಸೇರಿದಂತೆ ಬೆಳೆಗಾರರಿಗೆ ಸಕಾಲದಲ್ಲಿ ಕಾಫಿ ಮಂಡಳಿಯಿAದ ಸಿಗುವ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.

ಗೋಣಿಕೊಪ್ಪಲುವಿನ ದುರ್ಗಾಬೋಜಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಕಾಫಿಯಲ್ಲಿ ಸಮಗ್ರ ಕೀಟ, ರೋಗ ನಿರ್ವಹಣೆಯ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ಕೊಡಗು ಜಿಲ್ಲೆಯನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.

ಉತ್ತರ ಕೊಡಗು ಹಾಗೂ ದ.ಕೊಡಗು ಎರಡು ವಿಭಾಗಗಳಿದ್ದು ಇದರಲ್ಲಿ ಮಡಿಕೇರಿ, ಕುಶಾಲನಗರ ಹಾಗೂ ಸೋಮವಾರಪೇಟೆ ಒಂದು ವಿಭಾಗ ಮತ್ತೊಂದು ವೀರಾಜಪೇಟೆ ಹಾಗೂ ಪೊನ್ನಂಪೇಟೆಯಾಗಿದೆ. ಎರಡು ವಿಭಾಗದಲ್ಲಿಯೂ ಕಾಫಿ ಮಂಡಳಿಯ ಉಪನಿರ್ದೇಶಕರು ಕೆಲಸ ನಿರ್ವಹಿಸುತ್ತಿದ್ದಾರೆ. ಕೊಡಗಿನಲ್ಲಿ ಸುಮಾರು ೧.೨೦ ಲಕ್ಷ ಹೆಕ್ಟೇರ್ ಕಾಫಿ ಬೆಳೆಯುತ್ತಿದ್ದೇವೆ. ಜಿಲ್ಲೆಯಲ್ಲಿ ೪೩ ಸಾವಿರ ಬೆಳೆಗಾರರಿದ್ದು ಇವರೆಲ್ಲರ ಮಾಹಿತಿ ಕಾಫಿ ಬೋರ್ಡ್ನಲ್ಲಿ ಲಭ್ಯವಿದ್ದು ಸಕಾಲದಲ್ಲಿ ಕಾಫಿ ಮಂಡಳಿಯಲ್ಲಿ ಸಿಗುವ ಪ್ರಯೋಜನಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಬೆಳೆಗಾರರಿಗೆ ಅಗತ್ಯವಿದ್ದಲ್ಲಿ ಅವರ ತೋಟಕ್ಕೆ ತೆರಳಿ ಸೂಕ್ತ ಮಾರ್ಗದರ್ಶನ, ಕಾರ್ಮಿಕರಿಗೆ ಬೇಕಾದ ತರಬೇತಿ ಕಾರ್ಯಗಳು, ತೋಟದಲ್ಲಿ ಮಣ್ಣಿನ ಪರೀಕ್ಷೆಗೆ ಬೇಕಾದ ಮಾಹಿತಿಯನ್ನು ತರಬೇತಿ ಮೂಲಕ ನೀಡಲಾಗುತ್ತಿದೆ. ಅಲ್ಲದೆ ಆರ್ಥಿಕವಾಗಿ ಅಭಿವೃದ್ಧಿ ಕಂಡುಕೊಳ್ಳಲು ತರಬೇತಿಗಳನ್ನು ಒದಗಿಸಲಾಗುತ್ತಿದೆ. ಕಾಫಿ ಮಂಡಳಿಯ ವಿಸ್ತರಣ ಘಟಕದಿಂದ ನುರಿತ ತಜ್ಞರು ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಅಲ್ಲದೆ ಬೆಳೆಗಾರರ ಗುಂಪುಗಳನ್ನು ರಚಿಸುವ ಮೂಲಕ ಎರಡು ತಿಂಗಳಿಗೊಮ್ಮೆ ಇವರನ್ನು ಭೇಟಿ ಮಾಡುವ ಮೂಲಕ ಮಂಡಳಿಯಲ್ಲಿ ನಡೆಯುವ ಕಾರ್ಯಕ್ರಮದ ವಿವರ ತಿಳಿಸಲಾಗುತ್ತಿದೆ.

ಕಾಫಿ ತೋಟದಲ್ಲಿ ಕಾಫಿ ಕುಯ್ಲು ಸಂದರ್ಭ ಮಹಿಳೆಯರಿಗೆ ಹೆಚ್ಚಿನ ಕೆಲಸ ಲಭಿಸುತ್ತದೆ. ನಂತರ ಕೆಲಸ ಇಲ್ಲದ ಸಂದರ್ಭದಲ್ಲಿ ಇವರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಇವರಿಗೆ ಅಣಬೆ ಬೇಸಾಯ ಸೇರಿದಂತೆ ಇನ್ನಿತರ ಚಟುವಟಿಕೆ ನಡೆಸಲು ಪ್ರೋತ್ಸಾಹ ನೀಡಲಾಗುತ್ತದೆ. ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಂತಹ ಕಾರ್ಯಾಗಾರವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಉತ್ತಮ ಕಾಫಿ ತೋಟಗಳಿಗೆ ತೆರಳಿ ಅಧ್ಯಯನ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು. ರೈತರಿಗೆ ಅಗತ್ಯವಿರುವ ಮಣ್ಣಿನ ಪರೀಕ್ಷೆ, ನೂತನ ಔಷಧಿ ತಯಾರಿಕೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ವಿಸ್ತರಣ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಜ್ಞಾನಿಗಳು ತೋಟಗಳಿಗೆ ತೆರಳಿ ಸಲಹೆಗಳನ್ನು ನೀಡುತ್ತಾರೆ. ಗೋಣಿಕೊಪ್ಪಲುವಿನ ಕಾಫಿ ಬೋರ್ಡಿನಲ್ಲಿ ಮಣ್ಣಿನ ಪರೀಕ್ಷೆ ಮಾಡಿಕೊಡಲಾಗುತ್ತಿದೆ. ಈ ಹಿಂದೆ ಮಣ್ಣಿನ ಪರೀಕ್ಷೆಗಾಗಿ ಚಟ್ಟಳ್ಳಿ ಭಾಗಕ್ಕೆ ತೆರಳಬೇಕಾಗಿತ್ತು. ರೈತರಿಗೆ ಸಕಾಲದಲ್ಲಿ ಸಬ್ಸಿಡಿ ಮೂಲಕ ಕಾಫಿ ಮಂಡಳಿಯಿAದ ಹಲವು ಪ್ರಯೋಜನಗಳು ದೊರೆಯುತ್ತಿವೆ. ಇವುಗಳ ಸದುಪಯೋಗವನ್ನು ಅಗತ್ಯ ದಾಖಲಾತಿಗಳನ್ನು ನೀಡುವ ಮೂಲಕ ಬೆಳೆಗಾರರು ಪಡೆದುಕೊಳ್ಳಬೇಕು ಎಂದರು.

ಕಾರ್ಯಾಗಾರದಲ್ಲಿ ಕಾಫಿ ಮಂಡಳಿಯ ಚೆಟ್ಟಳಿ ವಿಭಾಗದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ಮಂಜುನಾಥ್ ರೆಡ್ಡಿ ತೋಟಗಾರಿಕಾ ತಜ್ಞರಾದ ಡಾ.ನಾಗರಾಜ್ ಬೆಳೆಗಾರರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಿದರು. ಎಲ್‌ಡಿಸಿ ಕಂಪೆನಿಯ ಸುಸ್ಥಿರತೆ ಸಂಯೋಜಕರಾದ ವಿ.ಅಜೆಯ್ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರಥ್ವಿನ್ ಸ್ವಾಗತಿಸಿ ವಂದಿಸಿದರು. ಕಾರ್ಯಾಗಾರದಲ್ಲಿ ಡಿಕ್ಷನ್ ಮಲ್ಟಿಟ್ರೆಡ್‌ನ ಮಾಲೀಕ ನಾಮೇರ ಪೊನ್ನಣ್ಣ, ವ್ಯವಸ್ಥಾಪಕ ಜಂಶಿ ಸೇರಿದಂತೆ ದ.ಕೊಡಗಿನ ವಿವಿಧ ಭಾಗದ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.