ಮಡಿಕೇರಿ, ಸೆ. ೧೧: ಸ್ವಚ್ಛ ಭಾರತ್ ಮಿಷನ್‌ನ ಭಾಗವಾಗಿ ಸ್ವಚ್ಛತಾ ಪಖ್ವಾಡ ಸಪ್ತಾಹ ಕಾರ್ಯಕ್ರಮವನ್ನು ಸರಕಾರ ಹಮ್ಮಿಕೊಂಡಿದ್ದು, ಇದರಲ್ಲಿ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಭಾಗವಹಿಸಿ ಸರಕಾರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಆದೇಶಿಸಿದ್ದು, ಇದರ ಅಂಗವಾಗಿ ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ೧೧,೧೨, ತರಗತಿ ವಿದ್ಯಾರ್ಥಿಗಳು ಸ್ಥಳೀಯ ಹಾತೂರು ಗ್ರಾಮದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ತೀರ್ಮಾನಗಳನ್ನು ಆಲಿಸಿದ್ದ ವಿದ್ಯಾರ್ಥಿಗಳು ತಮ್ಮ ಕೆಲವು ಸಲಹೆ, ಸೂಚನೆಗಳನ್ನು, ಬೇಡಿಕೆಗಳನ್ನು ಮುಂದಿಟ್ಟರು. ಮುಖ್ಯವಾಗಿ ತಮ್ಮ ಶಾಲೆಯ ಗೇಟಿನ ಮುಂದೆ ಸುರಕ್ಷತೆಯ ಗೇಟ್ ಇಲ್ಲದಿರುವುದು, ಕಸದ ಡಬ್ಬಿ ಇಲ್ಲದಿರಿವುದು, ಸಂಚಾರಿ ದಟ್ಟಣೆಯ ನಿರ್ವಹಣೆ ಸರಿಯಾಗಿ ಆಗದೆ ಇರುವುದು, ಶಾಲೆಯ ಗೇಟಿನ ಮುಂದೆ ಝೀಬ್ರಾ ಕ್ರಾಸಿಂಗ್ ಇಲ್ಲದಿರುವುದು, ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲದಿರುವುದು. ಹಾಗೇಯೆ ಶಾಲೆಯ ಗೇಟಿನ ಮುಂದೆ ವೇಗದ ಮಿತಿಯನ್ನು ನಿಯಂತ್ರಿಸುವ ಸೂಚನಾ ಫಲಕವಿಲ್ಲದಿರುವುದನ್ನು ಗಮನಕ್ಕೆ ತಂದರು. ಇವರ ಅಹವಾಲುಗಳನ್ನು ಸೂಚನೆ, ಬೇಡಿಕೆಗಳನ್ನು ಪರಿಗಣಿಸಿದ ಗ್ರಾಮಪಂಚಾಯಿತಿ ಮುಖ್ಯಸ್ಥರು ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.