ನಾಪೋಕ್ಲು, ಸೆ. ೧೧: ಇಲ್ಲಿಗೆ ಸಮೀಪದ ಕಕ್ಕುಂದಕಾಡಿನ ಶ್ರೀ ವೆಂಕಟೇಶ್ವರ ಗಣಪತಿ ಸೇವಾ ಸಮಿತಿಯ ವತಿಯಿಂದ ಕಕ್ಕುಂದಕಾಡುವಿನಲ್ಲಿರುವ ಬಾಳೆಯಡ ಶ್ಯಾಮ್ ಮಂದಪ್ಪ ಅವರ ಗದ್ದೆಯಲ್ಲಿ ಸಾರ್ವಜನಿಕರಿಗೆ ಕೆಸರು ಗದ್ದೆ ಕ್ರೀಡಾಕೂಟವನ್ನು ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಾಳೆಯಡ ಶಾರದಾ ಸುಬ್ರಮಣಿ ಅವರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಾರ್ವಜನಿಕರಿಗೆ ಆಯೋಜಿಸಿದ್ದ ಪುರುಷರ ಕಬಡ್ಡಿಯಲ್ಲಿ ಮೊದಲ ಬಹುಮಾನವನ್ನು ಬೆಟ್ಟಗಿರಿ ತಂಡದವರು ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ಇಂದಿರಾನಗರದ ತಂಡ ಪಡೆದುಕೊಂಡಿತು.
ಹಗ್ಗ ಜಗ್ಗಾಟದಲ್ಲಿ ಬೆಟ್ಟಗೇರಿ ತಂಡ ಮೊದಲ ಸ್ಥಾನ ಮತ್ತು ವೆಂಕಟರಮಣ ತಂಡ ಎರಡನೇ ಸ್ಥಾನವನ್ನು ಪಡೆದುಕೊಂಡರು. ಮಹಿಳಾ ಹಗ್ಗ ಜಗ್ಗಾಟದಲ್ಲಿ ಚೆರಿಯಪರಂಬು ತಂಡ ಮೊದಲ ಸ್ಥಾನ ಪಡೆದುಕೊಂಡರೆ ವೆಂಕಟರಮಣ ತಂಡ ಎರಡನೇ ಸ್ಥಾನವನ್ನು ಪಡೆದುಕೊಂಡಿತು.
ಕ್ರೀಡಾಕೂಟದಲ್ಲಿ ಪುರುಷರಿಗೂ, ಮಹಿಳೆಯರಿಗೂ, ಮಕ್ಕಳಿಗೂ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಪ್ರಮುಖರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗಣಪತಿ ಸೇವಾ ಸಮಿತಿ ಹಾಗೂ ಶ್ರೀ ವೆಂಕಟೇಶ್ವರ ದೇವಾಲಯದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಪ್ರೋತ್ಸಾಹಿಸಿದರು.