ಮುಳ್ಳೂರು, ಸೆ. ೧೧: ಸಮೀಪದ ಶನಿವಾರಸಂತೆ ಭಾರತಿ ಪ.ಪೂ. ಕಾಲೇಜು ಪ್ರೌಢಶಾಲಾ ವಿಭಾಗದ ನೇಸರ ಇಕೋಕ್ಲಬ್ ವತಿಯಿಂದ ಶಾಲೆಯ ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಗಣಪತಿ ಬಗ್ಗೆ ಮಾಹಿತಿ ಮತ್ತು ಗಣಪತಿ ತಯಾರಿಕೆ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶಾಲಾ ವಿಜ್ಞಾನ ಶಿಕ್ಷಕಿ ಹೆಚ್.ಎನ್. ಮಂಗಳ ಪರಿಸರ ಸ್ನೇಹಿ ಗಣಪತಿಯ ಮಹತ್ವದ ಬಗ್ಗೆ ಮಾಹಿತಿ ನೀಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಗಣೇಶನ ಹಬ್ಬದ ಸಂದರ್ಭದಲ್ಲಿ ಗಣಪತಿಮೂರ್ತಿ ತಯಾರಿಸಿ ಪ್ರತಿಷ್ಠಾಪಿಸುವುದು ಮತ್ತು ಅದನ್ನು ನೀರಿನಲ್ಲಿ ವಿಸರ್ಜಿಸುವುದು ವಾಡಿಕೆ. ಆದರೆ ರಾಸಾಯನಿಕ ಮಿಶ್ರಿತ ಗಣಪತಿಮೂರ್ತಿ ತಯಾರಿಸಿ ಅದನ್ನು ಕೆರೆ, ನದಿಗಳಲ್ಲಿ ವಿಸರ್ಜನೆ ಮಾಡುವುದರಿಂದ ನೀರಿನಲ್ಲಿರುವ ಜಲಚರಗಳು ನಾಶವಾಗುವುದರ ಜೊತೆಯಲ್ಲಿ ಜಲ ಮಾಲಿನ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಪಿ. ನರಸಿಂಹಮೂರ್ತಿ, ಸಹ ಶಿಕ್ಷಕರು ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳು ವಿವಿಧ ಪ್ರಕಾರಗಳ ಗಣಪತಿಮೂರ್ತಿ ತಯಾರಿಸಿದ ನಂತರ ಪೂಜಿಸಿ ಸಂಭ್ರಮ ಪಟ್ಟರು.