ಸೋಮವಾರಪೇಟೆ, ಸೆ. ೧೧ : ರಸ್ತೆ ಬದಿಯ ಬೇಲಿಯ ಬುಡದಲ್ಲಿದ್ದ ಮದ್ಯದ ಬಾಟಲ್ಗಳು, ತ್ಯಾಜ್ಯಗಳನ್ನು ರಸ್ತೆಯ ಮಧ್ಯಭಾಗದಲ್ಲಿ ಜೋಡಿಸಿಡುವ ಮೂಲಕ ವಿಕೃತಿ ಮೆರೆಯಲಾಗಿದೆ.
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು-ಯಡವಾರೆ ಗ್ರಾಮದ ಮನೆಗಳಿಗೆ ತೆರಳುವ ರಸ್ತೆಯು ಈ ಹಿಂದೆ ಅಗಲವಾಗಿದ್ದು, ಇತ್ತೀಚಿನ ವರ್ಷದಲ್ಲಿ ಎಸ್ಟೇಟ್ನವರು ರಸ್ತೆ ಜಾಗವನ್ನು ಒತ್ತುವರಿ ಮಾಡಿ ಬೇಲಿ ನಿರ್ಮಿಸಿದ್ದಾರೆ. ಇದರಿಂದಾಗಿ ವಾಹನಗಳು ತೆರಳಲು ಕಷ್ಟವಾಗಿದೆ ಎಂದು ಗ್ರಾಮಸ್ಥರು, ಐಗೂರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು.
ಈ ದೂರಿನಿಂದ ಬೇಲಿ ಸರಿಪಡಿಸುವ ಸಂದರ್ಭ ಹಲವು ಮಂದಿ ಬೇಲಿ ಬದಿಯಲ್ಲಿದ್ದ ಮದ್ಯದ ಬಾಟಲಿಗಳು, ನೀರಿನ ಬಾಟಲಿ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ರಸ್ತೆಯ ಮಧ್ಯದಲ್ಲಿ ಇಟ್ಟು ವಿಕೃತಿ ಮೆರೆದಿದ್ದಾರೆ. ಈ ರಸ್ತೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುತ್ತಾರೆ. ನೂರಾರು ವಾಹನಗಳು ತೆರಳುತ್ತವೆ.
ಇಂತಹ ಪರಿಸ್ಥಿತಿಯಲ್ಲಿ ಗಾಜಿನ ಬಾಟಲ್ಗಳನ್ನು ರಸ್ತೆಯ ಮಧ್ಯದಲ್ಲಿ ಇಟ್ಟು ವಿಕೃತಿ ಮೆರೆಯಲಾಗಿದೆ. ಮಕ್ಕಳು ನಡೆದಾಡುವ ರಸ್ತೆಯಲ್ಲಿ ಇಂತಹ ಕೃತ್ಯ ನಡೆಸಿರುವುದು ಸರಿಯೇ? ಬೇಲಿ ಒತ್ತುವರಿಯಾಗಿದೆ ಎಂದು ದೂರು ನೀಡಿದ್ದಕ್ಕೆ ಪ್ರತೀಕಾರವಾಗಿ ಈ ಕೆಲಸ ಮಾಡಲಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ರಸ್ತೆ ಒತ್ತುವರಿಯನ್ನು ತೆರವುಗೊಳಿಸಲು ಗ್ರಾ.ಪಂ. ಆಡಳಿತ ಮುಂದಾಗಬೇಕೆAದು ಒತ್ತಾಯಿಸಿದ್ದಾರೆ.