ಸೋಮವಾರಪೇಟೆ, ಸೆ. ೧೧: ತಾಲೂಕು ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಹಾಗೂ ಸರ್ಕಾರಿ ಸವಲತ್ತುಗಳನ್ನು ಫಲಾನುಭವಿಗಳಿಗೆ ಒದಗಿಸುವ ನಿಟ್ಟಿನಲ್ಲಿ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯೋನ್ಮುಖವಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಹಲವಷ್ಟು ಸಮಾಜಮುಖಿ ಕಾರ್ಯಗಳು ನಡೆದಿವೆ. ಸಮಿತಿಯ ಪ್ರಯತ್ನದಿಂದ ಇದೇ ಪ್ರಥಮ ಬಾರಿಗೆ ಮದಲಾಪುರ, ಯಲಕನೂರು, ಸೀಗೆಹೊಸೂರು, ಅಬ್ಬೂರುಕಟ್ಟೆ ಮಾರ್ಗದಲ್ಲಿ ಸರ್ಕಾರಿ ಸೇವೆ ಆರಂಭಗೊಳ್ಳುತ್ತಿದೆ ಎಂದು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ ತಿಳಿಸಿದರು.

ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಅನೇಕ ದಶಕಗಳ ಬೇಡಿಕೆಯಾಗಿದ್ದ ಅಬ್ಬೂರುಕಟ್ಟೆ, ಯಲಕನೂರು, ಮದಲಾಪುರ ಮಾರ್ಗದಲ್ಲಿ ಬಸ್ ಸೌಕರ್ಯ ಕಲ್ಪಿಸುವ ಪ್ರಸ್ತಾಪ ನೆನೆಗುದಿಗೆ ಬಿದ್ದಿತ್ತು. ಈ ನಿಟ್ಟಿನಲ್ಲಿ ಸಮಿತಿಯ ಪ್ರಯತ್ನದಿಂದಾಗಿ ಇದೀಗ ಕೆಎಸ್‌ಆರ್‌ಟಿಸಿಯಿಂದ ನೂತನ ಮಾರ್ಗಕ್ಕೆ ಆದೇಶ ಬಂದಿದ್ದು, ಸದ್ಯದಲ್ಲಿಯೇ ಬಸ್ ಸೇವೆ ಆರಂಭಗೊಳ್ಳಲಿದೆ ಎಂದರು.

ಬಸ್ ಸೇವೆ ಕಲ್ಪಿಸುವ ಸಂಬAಧ ಕ್ಷೇತ್ರದ ಶಾಸಕ ಮಂತರ್ ಗೌಡ, ಸಂಸ್ಥೆಯ ಜಿಲ್ಲಾಮಟ್ಟದ ಅಧಿಕಾರಿಗಳು, ಪುತ್ತೂರು ವಿಭಾಗದ ಅಧಿಕಾರಿಗಳು, ಡಿಟಿಓ, ಟಿ.ಸಿ., ವ್ಯವಸ್ಥಾಪಕರು ಹಾಗೂ ಸಾರಿಗೆ ಸಚಿವರ ಸಹಕಾರದಿಂದ ನೂತನ ಬಸ್ ಸೇವೆ ಆರಂಭಗೊಳ್ಳುತ್ತಿದೆ. ಪ್ರತಿದಿನ ಬೆಳಿಗ್ಗೆ ೭.೪೫ಕ್ಕೆ ಕುಶಾಲನಗರದಿಂದ ಹೊರಟು, ಮದಲಾಪುರ, ಯಲಕನೂರು, ಅಬ್ಬೂರುಕಟ್ಟೆ ಮೂಲಕ ೮.೪೫ಕ್ಕೆ ಸೋಮವಾರಪೇಟೆ ಆಗಮಿಸಲಿದೆ ಎಂದು ಮಾಹಿತಿ ನೀಡಿದರು.

ನಂತರ ಕೊಣನೂರು, ಅರಕಲಗೂಡು ಮಾರ್ಗವಾಗಿ ಹಾಸನಕ್ಕೆ ತಲುಪಲಿದೆ. ಮಧ್ಯಾಹ್ನ ೨.೩೦ಕ್ಕೆ ಹಾಸನದಿಂದ ಹೊರಟು ಕೊಣನೂರು ಮಾರ್ಗವಾಗಿ ಸೋಮವಾರಪೇಟೆಗೆ ಆಗಮಿಸಿ, ೪.೧೫ಕ್ಕೆ ಅಬ್ಬೂರುಕಟ್ಟೆ ಮಾರ್ಗವಾಗಿ ಕುಶಾಲನಗರಕ್ಕೆ ತೆರಳಲಿದೆ. ಇದರಿಂದಾಗಿ ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅನುಕೂಲ ವಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಿದಂತಾಗಿದೆ ಎಂದು ಅರುಣ್ ಹೇಳಿದರು.

ಇದರೊಂದಿಗೆ ಮಾದಾಪುರವನ್ನು ಹೋಬಳಿ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಸಮಿತಿಯು ಸರ್ಕಾರದ ಗಮನ ಸೆಳೆಯುತ್ತಿದೆ. ಈಗಾಗಲೇ ಸಭೆಗಳನ್ನು ಆಯೋಜಿಸಿ ಚರ್ಚಿಸಲಾಗಿದೆ. ಶಾಸಕರು, ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಲಾಗುವುದು. ಶಾಸಕರು ಈ ಬಗ್ಗೆ ಗಮನ ಹರಿಸುವ ಮೂಲಕ ಹೋಬಳಿ ಕೇಂದ್ರವನ್ನಾಗಿ ಮಾಡಬೇಕಿದೆ ಎಂದರು.

ಸಿ ಮತ್ತು ಡಿ ಜಾಗದ ಸಮಸ್ಯೆಗೆ ಒಗ್ಗಟ್ಟಿನ ಹೋರಾಟ ಅಗತ್ಯವಾಗಿದೆ. ಈವರೆಗೆ ಆಡಳಿತ ನಡೆಸಿದ ಯಾವ ಸರ್ಕಾರಗಳೂ ಸಹ ಜವಾಬ್ದಾರಿ ನಿರ್ವಹಿಸಿಲ್ಲ. ಅದರ ಪರಿಣಾಮ ಇದೀಗ ರೈತರಿಗೆ ಸಮಸ್ಯೆ ಸೃಷ್ಟಿಯಾಗಿದೆ. ಎಲ್ಲರೂ ಒಟ್ಟಾಗಿ ಈ ಬಗ್ಗೆ ಹೋರಾಟ ರೂಪಿಸಬೇಕಿದೆ. ಹಾಲಿ, ಮಾಜೀ ಶಾಸಕರು, ಜನಪ್ರತಿನಿಧಿಗಳು ಮುಂದೆ ಬರಬೇಕು. ಈ ಬಗೆಗಿನ ಹೋರಾಟದಲ್ಲಿ ರಾಜಕೀಯ ನುಸುಳಬಾರದು ಎಂದು ಅರುಣ್ ಕುಮಾರ್ ಅಭಿಪ್ರಾಯಿಸಿದರು.

ಕೇವಲ ಕೊಡಗು ಮಾತ್ರವಲ್ಲದೆ ಮಲೆನಾಡು ಭಾಗದ ಎಲ್ಲಾ ಶಾಸಕರುಗಳು ಹೋರಾಟದಲ್ಲಿ ಭಾಗಿಯಾಗಬೇಕು. ಈ ಬಗ್ಗೆ ಶಾಸಕ ಮಂತರ್ ಗೌಡ ಅವರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದ ಅವರು, ರೈತಪರವಾಗಿ ನಡೆಯುವ ಹೋರಾಟಗಳಿಗೆ ಅಭಿವೃದ್ಧಿ ಹೋರಾಟ ಸಮಿತಿ ಸದಾ ಕೈಜೋಡಿಸುತ್ತದೆ ಎಂದರು.

ಗೋಷ್ಠಿಯಲ್ಲಿ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ನಿರ್ದೇಶಕ ಜಿ.ಎಂ. ಹೂವಯ್ಯ, ಪಿ.ಕೆ. ರವಿ ಅವರುಗಳು ಉಪಸ್ಥಿತರಿದ್ದರು.