ಸೋಮವಾರಪೇಟೆ, ಸೆ. ೧೧: ಜಿಲ್ಲೆಯ ಪತ್ರಕರ್ತರಿಗೆ ಬಸ್ ಪಾಸ್ ಸೇವೆ ಒದಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು. ತಾ. ೧೧ ರಂದು ಸಾರಿಗೆ ಸಚಿವರು ಜಿಲ್ಲೆಗೆ ಆಗಮಿಸುತ್ತಿದ್ದು, ಈ ಬಗ್ಗೆ ಸಚಿವರ ಗಮನ ಸೆಳೆಯಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭರವಸೆ ನೀಡಿದರು.

ಕೊಡಗು ಪತ್ರಕರ್ತರ ಸಂಘದ ಆಶ್ರಯದಲ್ಲಿ ಪಟ್ಟಣದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಘಟನೆಗಳಲ್ಲಿ ವಿನೂತನ ಪ್ರಯತ್ನಗಳು ನಡೆಯಬೇಕು ಎಂದ ಅವರು, ಪತ್ರಕರ್ತರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಡಿಜಿಟಲ್ ಮಾಧ್ಯಮಗಳ ನಾಗಾಲೋಟದಲ್ಲಿ ಮಾಧ್ಯಮಗಳು ಚುರುಕಾಗಬೇಕು. ಮಾಧ್ಯಮಗಳು ಸತ್ಯಕ್ಕೆ ಪ್ರಾಧಾನ್ಯತೆ ನೀಡಬೇಕು. ಸಮಾಜಕ್ಕೆ ಮಾರ್ಗದರ್ಶನ ಆಗಬೇಕು. ಮಾಧ್ಯಮಗಳ ಮೂಲಕ ಬರುವ ಸಲಹೆಗಳು ಸಾರ್ವಜನಿಕರಿಗೆ ಉಪಯೋಗ ಆಗುವಂತಿರಬೇಕು ಎಂದರು.

ನೂತನ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಪತ್ರಕರ್ತರದು ಕಷ್ಟದ ಕೆಲಸವಾದರೂ ಸಮಾಜ ತಿದ್ದುವ ಕಾರ್ಯದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಕರ್ತರು ತಾಜಾ ಸುದ್ದಿ ಪ್ರಚಾರ ಮಾಡಬೇಕು. ಸಮಾಜ ತಿದ್ದುವ ಲೇಖನಗಳು ಬರಬೇಕು. ಬರವಣಿಗೆ ಗಳು ಚಾಟಿ ಏಟಿನಂತಿರಬೇಕು ಎಂದು ಅಭಿಪ್ರಾಯಿಸಿದರು.

ಪತ್ರಿಕಾರಂಗ ಸಮಾಜದಲ್ಲಿ ಪ್ರಾಮುಖ್ಯತೆ ಹೊಂದಿರುವ ರಂಗವಾಗಿದೆ. ನಮ್ಮ ಅವಧಿಯಲ್ಲಿ ಪತ್ರಕರ್ತರಿಗೆ ಹಲವಷ್ಟು ಸೇವೆ ಒದಗಿಸಲಾಗಿದೆ. ಸೋಮವಾರಪೇಟೆ ಹಾಗೂ ಮಡಿಕೇರಿ ಪತ್ರಿಕಾ ಭವನ ನಿರ್ಮಾಣಕ್ಕೆ ಸಹಕಾರ ನೀಡಲಾಗಿದೆ. ಪತ್ರಿಕೆಗಳು ಬೆಳೆದಂತೆ ನಾವುಗಳೂ ಬೆಳೆಯುತ್ತೇವೆ. ನಾಯಕರನ್ನು ಸೃಷ್ಟಿಸುವ ಶಕ್ತಿ ಪತ್ರಿಕೆಗಳಿಗಿವೆ. ಹೆಚ್ಚು ಮಂದಿ ಪತ್ರಿಕೆ ಓದುವಂತಾಗಬೇಕು. ಸಾಮಾಜಿಕ ಜಾಲತಾಣಗಳ ಮಾಹಿತಿ ಸತ್ಯ ಎಂದು ನಂಬಲು ಸಾಧ್ಯವಿಲ್ಲ. ಆದರೆ ಪತ್ರಿಕೆಗಳನ್ನು ನಂಬಬಹುದು. ಮುದ್ರಣ ಮಾಧ್ಯಮಗಳು ನಮಗೆ ಉತ್ತರದಾಯಿತ್ವ ಆಗಿರುತ್ತವೆ ಎಂದರು.

ರಾಜ್ಯ ಪತ್ರಕರ್ತರ ಸಂಘದ ಮಾಜೀ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ ಮಾತನಾಡಿ, ರಾಜ್ಯದಲ್ಲಿ ಪತ್ರಕರ್ತರ ಸ್ಥಿತಿ ಡೋಲಾಯ ಮಾನವಾಗಿದೆ. ಸರ್ಕಾರಗಳು ನೀಡುವ ಆಶ್ವಾಸನೆಗಳು ಈಡೇರುತ್ತಿಲ್ಲ. ರಾಜಕಾರಣಿಗಳ ಇಚ್ಛಾಶಕ್ತಿಯಿದ್ದರೂ ಅಧಿಕಾರಿಗಳಲ್ಲಿ ಇಚ್ಚಾಶಕ್ತಿ ಕೊರತೆಯಿದೆ. ರಾಜ್ಯದ ಎಲ್ಲಾ ಪತ್ರಕರ್ತರಿಗೂ ಬಸ್ ಪಾಸ್ ಒದಗಿಸಬೇಕು. ಈ ನಿಟ್ಟಿನಲ್ಲಿ ಶಾಸಕರು ಸರ್ಕಾರದ ಗಮನ ಸೆಳೆಯಬೇಕು. ಪತ್ರಕರ್ತರ ರಕ್ಷಣೆಯಾಗಬೇಕಾದರೆ ರಾಜಕಾರಣಿಗಳು ಜೊತೆ ನಿಲ್ಲಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಕುಮಾರ್ ಅವರು, ಸಾಮಾಜಿಕ ಕಳಕಳಿಯ ಚಿಂತನೆಯೊAದಿಗೆ ಸಂಘವು ಕಾರ್ಯನಿರ್ವಹಿಸಲಿದೆ. ವಿವಿಧ ದತ್ತಿ ನಿಧಿ ಸ್ಥಾಪನೆ ಮೂಲಕ ನಿರಂತರ ಕಾರ್ಯಕ್ರಮ ಆಯೋಜಿಸ ಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳೀಧರ್ ಮಾತನಾಡಿ, ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ಸರ್ಕಾರ ಹೆಚ್ಚಿನ ಸವಲತ್ತು ವಹಿಸಬೇಕು. ರಾಜ್ಯ ಸರ್ಕಾರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ ಘೋಷಿಸಿರುವ ೧೦ ಕೋಟಿ ಅನುದಾನ ಸದ್ಬಳಕೆ ಆಗಬೇಕಿದೆ. ಹಾಲಿ ಮಾಜಿ ಶಾಸಕರುಗಳು ಸಂಘದಲ್ಲಿ ದತ್ತಿನಿಧಿ ಸ್ಥಾಪಿಸಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ತಾನ್ಯ ಮುರುಳೀಧರ್ ಪ್ರಾರ್ಥಿಸಿದರು. ಪತ್ರಕರ್ತರಾದ ಕವನ್ ಕಾರ್ಯಪ್ಪ, ಡಿ.ಪಿ. ಲೋಕೇಶ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.