ಐಗೂರು, ಸೆ. ೧೧: ವಿದ್ಯಾರ್ಥಿಗಳು ಗಣಿತ ಎಂಬ ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಗಣಿತವು ಕಬ್ಬಿಣದ ಕಡಲೆ ಆಗುವುದಿಲ್ಲ ಎಂದು ಯಡವಾರೆ ಸ.ಹಿ.ಪ್ರಾ. ಶಾಲೆಯ ಮು. ಶಿಕ್ಷಕ ವೈ.ಸಿ. ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ಸ.ಹಿ.ಪ್ರಾ. ಶಾಲೆ, ಕಾಜೂರಿನಲ್ಲಿ ಐಗೂರು ಗ್ರಾ.ಪಂ. ವತಿಯಿಂದ ಹಮ್ಮಿಕೊಂಡಿದ್ದ ಗಣಿತ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಾಜೂರು ಮತ್ತು ಯಡವಾರೆ ಶಾಲೆಯ ಒಟ್ಟು ೩೫ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಾಜೂರು ಶಾಲೆಯ ೧೦ ವಿದ್ಯಾರ್ಥಿಗಳು ಮತ್ತು ಯಡವಾರೆ ಶಾಲೆಯ ೪ ವಿದ್ಯಾರ್ಥಿಗಳು ಬಹುಮಾನವನ್ನು ಪಡೆದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಸಿಬ್ಬಂದಿ ನಿಷ್ಮಿತ, ಗ್ರಂಥಪಾಲಕ ಮೊಣ್ಣಪ್ಪ, ಎಸ್ಡಿಎಂಸಿ ಉಪಾಧ್ಯಕ್ಷೆ ಆಶಾ, ಯಡವಾರೆ ಶಾಲೆಯ ಮು.ಶಿ. ವೈ.ಸಿ ಕುಮಾರ್, ಕೆಂಪೇಗೌಡ, ಕಾಜೂರು ಶಾಲೆಯ ಮು.ಶಿ. ಸರಳಕುಮಾರಿ, ಶಿಕ್ಷಕರಾದ ಅಜಿತ್ ಕುಮಾರ್, ಶಿಕ್ಷಕಿಯರಾದ ಅನಸೂಯ, ಇಂದಿರಾ ಮತ್ತು ಮಾನಸ ಭಾಗವಹಿಸಿದ್ದರು.