ಸಿದ್ದಾಪುರ, ಸೆ. ೯: ಜಿಲ್ಲೆಯ ಮುಸ್ಲಿಂ ಸಮುದಾಯದ ಸಮಗ್ರ ಅಭಿವೃದ್ಧಿ ಸುಧಾರಣೆ ಹಾಗೂ ಸುನ್ನತ್ ಜಮಾಅತ್‌ನ ಶಕ್ತೀಕರಣದ ಒಗ್ಗಟ್ಟಿನ ಮೂಲಕ ಪ್ರಸ್ತುತ ವಿದ್ಯಮಾನದಲ್ಲಿ ಎದುರಿಸುತ್ತಿರುವ ಸರ್ವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸುನ್ನಿ ವಿಭಾಗದ ಎರಡು ಪಂಗಡಗಳ ಮುಖಂಡರುಗಳು ಒಗ್ಗೂಡಿ ಜಿಲ್ಲಾ ಮಟ್ಟದ ಸುನ್ನಿ ಸಮನ್ವಯ ಸಮಿತಿಯನ್ನು ಪುನರ್ ರಚನೆ ಮಾಡಿ ಮುಖಂಡರುಗಳನ್ನು ಆಯ್ಕೆ ಮಾಡಿದ್ದಾರೆ.

ನೆಲ್ಯಹುದಿಕೇರಿ ಕೋಪಿಯೋ ಸಭಾಂಗಣದಲ್ಲಿ ನಡೆದ ಸುನ್ನಿ ಸಮನ್ವಯ ಜಿಲ್ಲಾ ಸಮಿತಿಗೆ ಸಮಸ್ತ ಕೊಡಗು ಜಮಾಯತುಲ್ ಉಲಮ ಅಧ್ಯಕ್ಷ ಎಂ.ಎA. ಅಬ್ದುಲ್ಲಾ ಫೈಝಿ ಉಸ್ತಾದ್ ಹಾಗೂ ಕೂರ್ಗ್ ಜಮಾಯತುಲ್ ಉಲಮ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದ್ ಅವರ ನಾಯಕತ್ವದ ನೇತೃತ್ವದಲ್ಲಿ ಉಪಾಧ್ಯಕ್ಷರುಗಳಾಗಿ ಕೆ.ಎ. ಯಾಕುಬ್ ಬಜಗುಂಡಿ, ಪಿ.ಎಂ. ಅಬ್ದುಲ್ ಲತೀಫ್ ಸುಂಟಿಕೊಪ್ಪ, ಸಂಚಾಲಕರುಗಳಾಗಿ ಹಫೀಲ್ ಸಅದಿ ತಣ್ಣೀರ್ ಹಳ್ಳ, ಉಮ್ಮರ್ ಪೈಝಿ ಸಿದ್ದಾಪುರ, ಪ್ರಚಾರ ಸಮಿತಿ ಪ್ರತಿನಿಧಿಗಳಾಗಿ ಹನೀಫ್ ಸಖಾಫಿ ಕೊಂಡAಗೇರಿ, ಸಿ.ಎಂ. ಹಮೀದ್ ಮೌಲವಿ ಸುಂಟಿಕೊಪ್ಪ ಸೇರಿದಂತೆ ಸುನ್ನತ್ ಜಮಾಅತ್‌ನ ೩೨ ಮುಖಂಡರುಗಳನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಶಾಫಿ, ಹನಫಿ ಪಂಗಡಗಳ ೧೫೦ ಜಮಾಅತ್ ಆಡಳಿತ ಮಂಡಳಿಯವರನ್ನು ಮುಂದಿನ ದಿನಗಳಲ್ಲಿ ಒಗ್ಗೂಡಿಸಿ ಮಹಲ್ ಸಂಗಮ ಕಾರ್ಯಕ್ರಮವನ್ನು ಅಕ್ಟೋಬರ್ ೨೨ ರಂದು ಸುಂಟಿಕೊಪ್ಪದಲ್ಲಿ ಆಯೋಜಿಸಲು ತೀರ್ಮಾನ ಕೈಗೊಳ್ಳಲಾಯಿತು.