ಮಡಿಕೇರಿ, ಸೆ. ೯: ಕೊಡಗು ವಿಶ್ವವಿದ್ಯಾನಿಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಸುರೇಶ ಅವರು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ಭೇಟಿ ನೀಡಿದರು.
ಈ ಸಂದರ್ಭ ಎಲ್ಲಾ ಕೊಠಡಿಗಳು, ಮೌಲ್ಯಮಾಪನ ಕೇಂದ್ರ, ಗ್ರಂಥಾಲಯ, ವಿಜ್ಞಾನ ಲ್ಯಾಬ್ ಹಾಗೂ ಕಂಪ್ಯೂಟರ್ ಲ್ಯಾಬ್ಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಕೊಠಡಿಗಳಲ್ಲಿ ನೀರು ಸುರಿಯುತ್ತಿರುವುದನ್ನು ಕಂಡ ಕುಲಸಚಿವರು ತಕ್ಷಣ ಕೊಠಡಿಗಳ ನವೀಕರಣ ಆಗಬೇಕು. ಈ ಹಿನ್ನೆಲೆಯಲ್ಲಿ ಕುಲಪತಿಗಳ ಜತೆಗೂಡಿ ಸ್ಥಳೀಯ ಶಾಸಕರು, ಸಂಸದರಿಗೆ ಕಾಲೇಜಿನ ದುಸ್ಥಿತಿ ಬಗ್ಗೆ ಮಾಹಿತಿ ನೀಡಲಾಗುವುದು.
ಈ ಕಾಲೇಜಿಗೆ ದೊಡ್ಡ ಇತಿಹಾಸವಿದ್ದು, ಸುವರ್ಣ ಮಹೋತ್ಸವ ಆಚರಣೆ ಹತ್ತಿರವಾಗುತ್ತಿದೆ. ಆದ್ದರಿಂದ ಸರ್ಕಾರದ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದರು.
ವಿಶ್ವವಿದ್ಯಾನಿಲಯ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಶೀಘ್ರ ಮೌಲ್ಯಮಾಪನ ಮಾಡಿಸಿ ಪರೀಕ್ಷೆಯ ಫಲಿತಾಂಶ ಕೊಡಲಾಗುವುದು ಎಂದರು.
ಸುರೇಶ ಅವರನ್ನು ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಮತ್ತು ಪ್ರಾಧ್ಯಾಪಕರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಸಂಯೋಜಕರಾದ ಡಾ.ರವಿಶಂಕರ್, ಡಾ.ತಿಪ್ಪೇಸ್ವಾಮಿ, ಡಾ. ನಾಗರಾಜ್ ಕೆ.ಟಿ, ಡಾ. ಎಂ.ಪಿ. ಕೃಷ್ಣ, ಡಾ.ಮಂಜುನಾಥ್, ಡಾ.ಅರುಣ್ ಕುಮಾರ್, ಮತ್ತಿತರರು ಇದ್ದರು.