*ಗೋಣಿಕೊಪ್ಪ, ಸೆ. ೮: ಆಹಾರ ಅರಸಿಕೊಂಡು ಕಾಡಿಗೆ ತೆರಳಿ ಮತ್ತೆ ಶಿಬಿರಕ್ಕೆ ಬಾರದೆ ತೀವ್ರ ಮೊಂಡುತನ ತೋರಿ ಆತಂಕಕ್ಕೆ ಕಾರಣವಾಗಿದ್ದ ಪಾರ್ಥನನ್ನು ಕೊನೆಗೂ ಅರಣಾಧಿಕಾರಿಗಳು ಮರಳಿ ಶಿಬಿರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಶನಿವಾರ ತಿತಿಮತಿ ಮತಿಗೋಡು ಆನೆ ಶಿಬಿರದಿಂದ ನಾಪತ್ತೆಯಾಗಿದ್ದ ಸಾಕಾನೆಯನ್ನು ಅರಣ್ಯ ಅಧಿಕಾರಿಗಳು ಹಗಲಿರುಳು ಹುಡುಕಿ ಭಾನುವಾರ ಸಂಜೆ ಮಡೇಯನೂರು, ಬೇಗೂರು ಸಮೀಪ ಪಾರ್ಥನನ್ನು ಪತ್ತೆ ಹಚ್ಚಿದ್ದಾರೆ.
ಆನೆ ಶಿಬಿರದಿಂದ ಸಾಕಾನೆಯೊಂದು ದಿಢೀರ್ ನಾಪತ್ತೆಯಾದ ಪ್ರಕರಣ ತಿತಿಮತಿ ಸಮೀಪದ ಮತ್ತಿಗೋಡು ಆನೆ ಶಿಬಿರದಲ್ಲಿ ಅತಂಕಕ್ಕೆ ಕಾರಣವಾಗಿತ್ತು.
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಸೆರೆ ಹಿಡಿದಿದ್ದ ಈ ಆನೆಯನ್ನು ಕಳೆದ ಆರು ತಿಂಗಳ ಹಿಂದೆ ಮತ್ತಿಗೋಡಿಗೆ ತಂದು ಪಳಗಿಸಿ ಪಾರ್ಥ ಎಂದು ನಾಮಕರಣ ಮಾಡಲಾಗಿತ್ತು. ಇದಕ್ಕೆ ೨೯ ವರ್ಷ ಪ್ರಾಯವಾಗಿತ್ತು.
ತರಬೇತಿ ಪೂರ್ಣಗೊಂಡ ನಂತರ ಆನೆಯನ್ನು ಹೊರಗೆ ಬಿಡಲಾಗಿತ್ತು. ಈ ಸಂದರ್ಭದಲ್ಲಿ ತಪ್ಪಿಸಿಕೊಂಡಿರುವ ಸಾಕಾನೆ ಇದೀಗ ಅರಣ್ಯ ಇಲಾಖೆಗೆ ತೀವ್ರ ತಲೆ ನೋವು ತಂದಿತ್ತು.
-ಎನ್.ಎನ್. ದಿನೇಶ್