ಗೋಣಿಕೊಪ್ಪಲು, ಆ. ೨೭: ಸ್ವಾತಂತ್ರö್ಯ ಬಳಿಕ ಹಲವು ದಶಕ ಕಳೆದರೂ ಇನ್ನೂ ಕೂಡ ಆದಿವಾಸಿಗಳ ಸಂಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮೂಲ ಸೌಕರ್ಯ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ತಿತಿಮತಿ ಗ್ರಾ.ಪಂ. ಎದುರು ದಲಿತ ಹಕ್ಕುಗಳ ಆಂದೋಲನ ಸಮಿತಿಯಿಂದ ಪ್ರತಿಭಟನೆ ನಡೆಯಿತು. ಹಾಡಿಗಳಿಗೆ ಮೂಲ ಸೌಕರ್ಯ ಗಳನ್ನು ಒದಗಿಸಲು ಪಂಚಾಯಿತಿ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ (ಆಲ್ ಇಂಡಿಯಾ ದಲಿತ್ ರೈಟ್ಸ್ ಕಮಿಟಿ) ಜಿಲ್ಲಾಧ್ಯಕ್ಷ ಮಾಯಮುಡಿ ರಮೇಶ್ ಆಗ್ರಹಿಸಿದರು. ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಸಮಿತಿ (ಆಲ್ ಇಂಡಿಯಾ ದಲಿತ್ ರೈಟ್ಸ್ ಕಮಿಟಿ) ವತಿಯಿಂದ ಹಮ್ಮಿಕೊಂಡಿದ್ದ ಸಾಂಕೇತಿಕ ಧರಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಯಮುಡಿ ರಮೇಶ್ ಹಾಡಿಗಳಲ್ಲಿ ನಾಗರಿಕರಿಗೆ ಅಗತ್ಯವಿರುವ ಶೌಚಾಲಯವಿಲ್ಲದೆ ಬಹಿದೆಸೆಗೆ ತೆರಳಬೇಕಿದೆ. ಇದರಿಂದ ಈ ನಿಟ್ಟಿನಲ್ಲಿ ಪ್ರತಿ ಕುಟುಂಬಕ್ಕೆ ಅಗತ್ಯವಿರುವ ಶೌಚಾಲಯಗಳನ್ನು ಕೂಡಲೇ ನಿರ್ಮಿಸಿಕೊಡುವಂತೆ ಆಗ್ರಹಿಸಿದರು. ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಗ್ಗನಹಡ್ಲು ಮತ್ತು ರೇಷ್ಮೆಹಡ್ಲು ಹಾಡಿಗಳಲ್ಲಿ ೯೦ಕ್ಕೂ ಹೆಚ್ಚಿನ ಆದಿವಾಸಿಗಳ ಕುಟುಂಬಗಳು ವಾಸವಿವೆ. ಇಲ್ಲಿಗೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿದರು.
ತಿತಿಮತಿ ಗ್ರಾಮ ಪಂಚಾಯಿತಿಯ ದ್ವಿತೀಯ ದರ್ಜೆ ಸಹಾಯಕರಾದ ಕಾಳಪ್ಪ ಪ್ರತಿಭಟನೆಕಾರರ ಮನವಿ ಸ್ವೀಕರಿಸಿ ಹಾಡಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಡಲಾಗುವುದು ಅಲ್ಲದೆ ಗಿರಿಜನ ಕಲ್ಯಾಣಾ ಇಲಾಖೆ ವತಿಯಿಂದ ಅರ್ಹರಿಗೆ ಮನೆ ಮಂಜೂರಾತಿ ಕಾರ್ಯ ನಡೆಯುತ್ತಿದೆ. ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಹಲವು ಬೇಡಿಕೆ ಗಳನ್ನು ಈಡೇರಿಸಲು ಪಂಚಾಯಿತಿ ವತಿಯಿಂದ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾ ಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಗ್ಗನಹಡ್ಲು, ರೇಷ್ಮೆಹಡ್ಲು ಸೇರಿದಂತೆ ಇನ್ನಿತರ ಕಡೆಗಳಿಂದ ಆದಿವಾಸಿಗಳು ಭಾಗವಹಿಸಿದ್ದರು. ಸಂಘಟನೆಯ ಪದಾಧಿಕಾರಿಗಳಾದ ಜೆ.ಜಿ. ಮಣಿ, ಜೆ.ಜಿ.ಸೀತೆ ಹಾಗೂ ಜೆ.ಎಲ್. ಗೌರಿ ಸೇರಿದಂತೆ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.