ಕಣಿವೆ, ಆ. ೨೭ : ಕೊಡಗು ಜಿಲ್ಲೆಯ ಪ್ರಮುಖ ಕೈಗಾರಿಕಾ ಪ್ರದೇಶವಾದ ಕುಶಾಲನಗರ ತಾಲೂಕಿನ ಕೂಡ್ಲೂರು ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಯ ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಕುಶಾಲನಗರದ ನಿಯೋಗ ಕೊಡಗು ಮೈಸೂರು ಸಂಸದ ಯಧುವೀರ್ ಒಡೆಯರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕುಶಾಲನಗರದ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು ನೇತೃತ್ವದ ತಂಡ ಮೈಸೂರಿನ ಸಂಸದರ ಕಚೇರಿಗೆ ನಿಯೋಗ ತೆರಳಿ ಕುಶಾಲನಗರದಲ್ಲಿ ಅಗತ್ಯವಿರುವ ಪ್ರಮುಖ ಯೋಜನೆಗಳ ಮಂಜೂರಾತಿಗಾಗಿ ಚರ್ಚಿಸಿ ಮನವಿ ಸಲ್ಲಿಸಿತು.
ಈ ಸಂದರ್ಭ ಸಂಸದರಿಗೆ ವಿವರಣೆ ನೀಡಿದ ವಕೀಲ ನಾಗೇಂದ್ರ ಬಾಬು, ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಸಂಸ್ಕರಿಸಲ್ಪಡುವ ೧.೪೦ ಸಾವಿರ ಟನ್ ಪ್ರಮಾಣದ ಕಾಫಿಯನ್ನು ರಫ್ತು ಮಾಡಲು ಕೈಗಾರಿಕಾ ಬಡಾವಣೆಗೆ ಹೊಂದಿಕೊAಡAತಿರುವ ಮುತ್ತಿನ ಮುಳ್ಳುಸೋಗೆಯ ಕಾವೇರಿ ನದಿ ದಂಡೆಯವರೆಗೆ ರೈಲ್ವೆ ಯೋಜನೆ ಫಲಪ್ರದವಾಗಬೇಕು. ಈ ರೈಲ್ವೆ ಯೋಜನೆ ಅನುಷ್ಠಾನಗೊಂಡಲ್ಲಿ ಚಾಮರಾಜನಗರ, ಮೈಸೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ನಾಗೇಂದ್ರ ಬಾಬು ವಿವರಿಸಿದರು.
ಹಾಗೆಯೇ ಕುಶಾಲನಗರದಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣ, ಹಾರಂಗಿ ಜಲಾಶಯ ಪ್ರದೇಶದಲ್ಲಿ ನೆನೆಗುದಿಗೆ ಬಿದ್ದಿರುವ ಹೆಲಿಪ್ಯಾಡ್ ಟೂರಿಸಂಗೆ ಚಾಲನೆ ನೀಡಬೇಕು.
ಚಿಕ್ಕ ಅಳುವಾರದಲ್ಲಿ ಮಿನಿ ವಿಮಾನ ನಿಲ್ದಾಣ ಯೋಜನೆ ಜಾರಿಗೊಳಿಸಬೇಕು. ಈಗಾಗಲೇ ಅಲ್ಲಿ ೮೭ ಎಕರೆ ಭೂಮಿ ಇದೆ. ಇನ್ನುಳಿದ ೩೦ ಎಕರೆ ಭೂಮಿಯನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗೇಂದ್ರ ಬಾಬು ಸಂಸದರಿಗೆ ವಿವರಿಸಿ ಪ್ರಸ್ತಾವನೆ ಸಲ್ಲಿಸಿದರು. ಬಳಿಕ ಪ್ರತಿಕ್ರಿಯಿಸಿದ ಸಂಸದರು, ಈ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು. ನಿಯೋಗದಲ್ಲಿ ಕುಶಾಲನಗರ ಪುರಸಭೆ ಸದಸ್ಯ ವಿ.ಎಸ್.ಆನಂದಕುಮಾರ್, ಪ್ರಮುಖರಾದ ಕೃಷ್ಣಪ್ಪ, ಹೆಚ್.ಟಿ.ವಸಂತ, ಗಿರೀಶ್ ಇದ್ದರು.