ಮಡಿಕೇರಿ, ಆ. ೨೭: ರಾಜ್ಯದ ಇನ್ನೆಲ್ಲೂ ಕಾಣದ ಗಬ್ಬೆದ್ದ ಮಾಂಸ ಮಾರುಕಟ್ಟೆ ಯೊಂದು ಮಡಿಕೇರಿಯಲ್ಲಿದೆ ಎಂಬುದು ನಮ್ಮ ಕಾಲದ ದುರಂತ. ದೂರಕ್ಕೆ ಗಬ್ಬು ವಾಸನೆ ಬೀರುವ, ಸಮೀಪಿಸಿದರೆ ವಾಕರಿಕೆ ತರಿಸುವ, ನಿಂತರೆ ಕಾಯಿಲೆ ಕಸಾಲೆಗಳೇ ಧಾಂಗುಡಿಯಿಡುವ ಮಾಂಸ ಮಾರುಕಟ್ಟೆಯ ಇಂದಿನ ಸ್ಥಿತಿಗತಿ ದೈನ್ಯವಾಗಿದೆ. ಮಾರುಕಟ್ಟೆಗೆ ಹೋದವರು ಜೀವಮಾನದಲ್ಲೇ ಮಾಂಸಾಹಾರ ತ್ಯಜಿಸÀಲು ಪಣ ತೊಟ್ಟರೂ ಅಚ್ಚರಿಯೇನಿಲ್ಲ.

ಜರ್ಝರಿತ ಕಟ್ಟಡಗಳು!

ಮಾಂಸ ಮಾರುಕಟ್ಟೆಯ ಎಲ್ಲಾ ಕಟ್ಟಡಗಳು ಜರ್ಝರಿತವಾಗಿ ನೆಲಕಚ್ಚಲು ಅಣಿಯಾಗಿವೆ. ಕೆಲವು ಕಟ್ಟಡಗಳು ಬಿರುಕುಬಿಟ್ಟಿದ್ದರೆ, ಇನ್ನೂ ಕೆಲವು ಅರ್ಧ ಭಾಗÀ ಕುಸಿದು, ಹಿಂಬದಿಯ ಮರದ ಆಸರೆಯಲ್ಲಿ ವಾಲಿಕೊಂಡು ನಿಂತಿವೆ. ಯಾವ ಕ್ಷಣದಲ್ಲಿ ಈ ಕಟ್ಟಡಗಳು ಧರೆಗುರುಳುತ್ತವೋ ಹೇಳತೀರದು. ಮಳೆಗಾಲದಲ್ಲಿ ವ್ಯಾಪಾರಿಗಳು ಪ್ರಾಣವನ್ನು ಮುಷ್ಠಿಯಲ್ಲಿಟ್ಟುಕೊಂಡೇ ಈ ಕಟ್ಟಡದೊಳಗೆ ವ್ಯಾಪಾರ ಮಾಡುತ್ತಾರೆ. ಇಂಥಹ ಶಿಥಿಲ ಕಟ್ಟಡಗಳಲ್ಲೇ ಮಾಂಸ ಸ್ವಚ್ಛಮಾಡುವ, ತೊಳೆಯುವ, ಕತ್ತರಿಸುವ ಕಾರ್ಯ ನಡೆಯುತ್ತಿದೆ. ಆವರಣವನ್ನು ಸ್ವಚ್ಛವಾಗಿಟ್ಟು ಕೊಳ್ಳೋಣವೆಂದರೆ ತೀರಾ ಇಕ್ಕಟ್ಟಿನ ಜಾಗದಲ್ಲಿ ಇದೆಲ್ಲ ಸಾಧ್ಯವೇ ಆಗದು. ದುರ್ವಾಸನೆ ಹರಡುತ್ತಿರುವ ಈ ಮಾಂಸ ಮಾರುಕಟ್ಟೆ ಸ್ವತಃ ಅಲ್ಲಿನ ವ್ಯಾಪಾರಿಗಳಿಗೆ ವಾಕರಿಕೆ ತರಿಸುತ್ತಿದೆ. ಜನರಂತೂ ಮೂಗನ್ನು ಭದ್ರವಾಗಿ ಮುಚ್ಚಿಕೊಂಡೇ ಮಾಂಸ ಖರೀದಿಸಬೇಕು. ಈ ದುರ್ವಾಸನೆಗೆ ಮುಗಿಬೀಳುವ ಅಸಂಖ್ಯ ಬೀದಿನಾಯಿಗಳು ಎಣಿಕೆಗೆ ಸಿಗಲಾರವು. ಮಾಂಸದ ಚೂರಿಗಾಗಿ ಪರಸ್ಪರ ಕಚ್ಚಾಡಿಕೊಳ್ಳುವ ಈ ನಾಯಿಗಳು ಜನರ ಮೇಲೆರಗಲೂ ಸನ್ನದ್ಧವಾದಂತಿವೆ.

ತ್ಯಾಜ್ಯದೊಳಗಿದೆ ಕಸಾಯಿ ಖಾನೆ!

ಮೇಲ್ನೋಟಕ್ಕೆ ಸಣ್ಣಸಣ್ಣ ಗೂಡಂಗಡಿಗಳ ರೀತಿ ಕಾಣುವ ಮಾಂಸ ಮಾರುಕಟ್ಟೆಯ ಹಿಂಭಾಗಕ್ಕೆ ಹೋದರೆ ನರಕದ ದರ್ಶನವೇ ಆಗುತ್ತದೆ. ಎಲ್ಲಾ ಕಟ್ಟಡಗಳು ತ್ಯಾಜ್ಯದ ರಾಶಿಯೊಳಗೆ ಮುಳುಗಿ ನಿಂತಿರುವAತೆ ಕಾಣುತ್ತಿವೆ. ಕೆಳಭಾಗದಲ್ಲಿ, ಹರಿದು ಹೆಪ್ಪುಗಟ್ಟಿರುವ (ಮೊದಲ ಪುಟದಿಂದ) ಗಾಢ ಕಂದುಬಣ್ಣದ ಕೊಳಕು ಕೆಸರಿನ ರಾಶಿಯೇ `ಶುಚಿತ್ವ’ವನ್ನು ಸಾರಿ ಹೇಳುತ್ತದೆ!. ಈ ಕೊಳಚೆಯ ಮಧ್ಯೆ, ಹಿಂದೆAದೋ ನಿರ್ಮಿಸಿದ ಕಸಾಯಿ ಖಾನೆ ಕಟ್ಟಡ ಬಿರುಬೆತ್ತಲೆಯಾಗಿ ನಿಂತುಕೊAಡಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕಸಾಯಿ ಖಾನೆ, ಕೆಸರುಕೊಚ್ಚೆಯ ಪ್ರಳಯಕ್ಕೆ ಸಿಕ್ಕಂತೆ ಅನಾಥವಾಗಿ ನಿಂತು, ಅಧಿಕಾರಶಾಹಿ ಮತ್ತು ನಿರ್ಲಜ್ಜ ನಿರ್ಲಕ್ಷö್ಯತೆಯನ್ನು ಸಾರಿ ಹೇಳುತ್ತಿದೆ.

ವಾಕರಿಕೆ- ಸಾಂಕ್ರಾಮಿಕ ರೋಗ!

ಕುರಿ ಮತ್ತು ಕೋಳಿ ಮಾಂಸದ ಮಳಿಗೆಗಳ ಹಿಂಭಾಗದಲ್ಲಿ ಮನುಷ್ಯರು ನೋಡಬಾರದ ದೃಶ್ಯವೇ ಎದುರಾಗುತ್ತದೆ. ಕಾಲಿಟ್ಟರೆ, ವಾಕರಿಕೆ ಬಂದು, ಹೊಟ್ಟೆಯಲ್ಲಿರುವ ಎಲ್ಲವೂ ಹೊರಬಂದರೂ ಅಚ್ಛರಿಯೇನಲ್ಲ. ಅಲ್ಲಿ ಇಣುಕಿದವರು ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರುವುದಂತೂ ಖಂಡಿತ. ಇಲ್ಲಿ ಸಂತೆ ವ್ಯಾಪಾರಿಗಳಿಗೆ ಅಥವಾ ಸಾರ್ವಜನಿಕರಿಗೆ ಕನಿಷ್ಟ ಶೌಚಾಲಯವೂ ಇಲ್ಲ. ಮೂಲೆಯಲ್ಲಿರುವ ಶೌಚಾಲಯ ಮಾಂಸ ಮಾರುಕಟ್ಟೆಯ ಕೊಳಕನ್ನೂ ಮೀರಿಸುವಂತಿದೆ. ಹೈಟೆಕ್ ಮಾರುಕಟ್ಟೆಯ ಪ್ರವೇಶ ದ್ವಾರದಲ್ಲೇ ನೆಲ ಕುಸಿಯುತ್ತಿದೆ. ಬೀಡಾಡಿ ದನಗಳು, ನಾಯಿಗಳ ಹಾವಳಿ, ಅಶುಚಿತ್ವಗಳಿಂದ ಹೈಟೆಕ್ ಮಾರುಕಟ್ಟೆಯೇ ಸಮಸ್ಯೆಗಳ ಆಗರವಾಗುತ್ತಿದೆ.

ಮೊದಲೇ ಹೇಳಿದಂತೆ, ರಾಜ್ಯದ ಯಾವ ಜಿಲ್ಲಾ ಕೇಂದ್ರಕ್ಕೂ ಬಾರದ ದುರ್ಗತಿ ಮಡಿಕೇರಿಗೆ ಬಂದಿದೆ. ನಗರಸಭೆಗೆ ಬರುತ್ತಿರುವ ಕೋಟ್ಯಂತರ ಅನುದಾನದ ಬಗ್ಗೆ ಅದು ಖರ್ಚಾಗುತ್ತಿರುವ ವಿಧಾನದ ಬಗ್ಗೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಬಗ್ಗೆ ಸಾರ್ವಜನಿಕರಲ್ಲೇ ಶಂಕೆ ಮತ್ತು ಗೊಂದಲಗಳು ಉಳಿದುಕೊಂಡಿವೆ. ಮಾಂಸ ಮತ್ತು ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸುವ ಹೇಳಿಕೆ ಕೊಟ್ಟವರು, ಮಾತು ಮರೆತ್ತಿದ್ದಾರೆ. ಹೊಸ ಕಟ್ಟಡ ನಿರ್ಮಾಣವಂತೂ ಕಡತಗಳಲ್ಲೇ ಉಳಿದು ಕೊಳೆಯುತ್ತಿದೆ.

ವರ್ಷಗಳಿಂದಲೂ ಅದೇ ಭರವಸೆಯ ಮಾತುಗಳಿಂದ ಜನರಿಗೆ ಮಂಕುಬೂದಿ ಎರಚುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅದೆಷ್ಟೋ ಆಯುಕ್ತರು, ಅಧ್ಯಕ್ಷರು ಬದಲಾದರೂ ಮಾಂಸ ಮಾರುಕಟ್ಟೆಯ ದೈನೇಸಿ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಬದಲಿಗೆ, ನಗರವನ್ನು ಏಳೆಂಟು ವರ್ಷಗಳಿಂದಲೂ ಭರವಸೆಗಳೇ ಆಳುತ್ತಿವೆ!

-ಆನಂದ್ ಕೊಡಗು