ಮುಳ್ಳೂರು, ಆ. ೨೫: ‘ವಿದ್ಯಾರ್ಥಿ ಗಳು ಶ್ರದ್ಧೆ, ಗುರಿ, ಯೋಜನೆ, ಕಠಿಣ ಪರಿಶ್ರಮ ಮುಂತಾದ ಮನೋ ಭಾವನೆಯನ್ನು ಮೈಗೂಡಿಸಿಕೊಂಡರೆ ಸಾಧನೆ ಮಾಡಬಹುದು ಎಂದು ಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು.
ಸಮೀಪದ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಪದವಿ ಮತ್ತು ಪ.ಪೂ. ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವತಿಯಿಂದ ‘ಚಿಂತೆಯಿAದ ಚಿಂತನೆಗೆ ಆರೋಗ್ಯಕರ ಮನಸುಗಳಿಗೆ’ ಎಂಬ ಶೀರ್ಷಿಕೆಯಲ್ಲಿ ನಡೆದ ೫ನೇ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಸಜ್ಜನ ಮತ್ತು ಸಮಾನ ಮನಸಿನ ಸ್ನೇಹಿತರ ಸಂಗವನ್ನು ಮಾಡಬೇಕು. ದುಶ್ಚಟಗಳಿಂದ ದೂರವಿದ್ದು, ವಿಶ್ವಾಸದ ಮನೋಭಾವನೆಯನ್ನಿಟ್ಟುಕೊಂಡು ಮುನ್ನಡೆದರೆ ಸಾಧನೆಯ ಹಾದಿ ಸುಲಭವಾಗುತ್ತದೆ ಎಂದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವೀರಾಜಪೇಟೆ ಶಾಸಕ ಎಸ್.ಎಸ್. ಪೊನ್ನಣ್ಣ ಮಾತನಾಡಿ, ಜಾತಿ, ಧರ್ಮ, ಬಡವ ಬಲ್ಲಿದ ಎಂಬ ತಾರತಮ್ಯವನ್ನು ಬಿಡಬೇಕು. ಇವುಗಳಿಂದ ಸಮಾಜ ಅಭಿವೃದ್ಧಿಯಾಗುವುದಿಲ್ಲ. ವ್ಯಕ್ತಿತ್ವ ವಿಕಸನ, ಮಾನವಿಯ ಮೌಲ್ಯದಿಂದ ಸಮಾಜವನ್ನು ಅಭಿವೃದ್ಧಿಗೊಳಿಸಬಹುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ತಪ್ಪುಗಳನ್ನು ತಾವೇ ಹುಡುಕಿಕೊಂಡು ಅದನ್ನು ಸರಿಪಡಿಸಿಕೊಂಡರೆ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ವಿದ್ಯಾಸಂಸ್ಥೆ ಅಧ್ಯಕ್ಷ ಮತ್ತು ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಧಕರಾಗಿ ಹೊರಹೊಮ್ಮಬೇಕು ಎಂಬ ಉದ್ದೇಶದಿಂದ ನಮ್ಮ ವಿದ್ಯಾಸಂಸ್ಥೆಯಲ್ಲಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ವೇದಿಕೆಯಲ್ಲಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಪರಮೇಶ್. ಖಜಾಂಚಿ ಡಾ,ಉದಯ್ಕುಮಾರ್ ನಿರ್ದೇಶಕ ಯತೀಶ್, ಕಾಲೇಜು ಪ್ರಾಂಶುಪಾಲ ಎಂ.ಆರ್. ನಿರಂಜನ್ ಪ್ರಮುಖರಾದ ಕೆ.ಪಿ. ಚಂದ್ರಕಲಾ ವಿದ್ಯಾಸಂಸ್ಥೆ ನಿರ್ದೇಶಕರು ಹಾಜರಿದ್ದರು.