ಗೋಣಿಕೊಪ್ಪಲು, ಆ. ೨೫ : ತಿತಿಮತಿ ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ತಾ. ೨೬ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಗೆ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ (ಆಲ್ ಇಂಡಿಯಾ ದಲಿತ್ ರೈಟ್ಸ್ ಕಮಿಟಿ) ವತಿಯಿಂದ ಪ್ರತಿಭಟನೆ ನಡೆಸಲಿದ್ದೇವೆ ಎಂದು ಜಿಲ್ಲಾಧ್ಯಕ್ಷ ಮಾಯಮುಡಿ ರಮೇಶ್ ತಿಳಿಸಿದ್ದಾರೆ.
ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಂತೆ ಬೊಗ್ಗನಹಡ್ಲು ಮತ್ತು ರೇಷ್ಮೆಹಡ್ಲು ಎಂಬ ಎರಡು ಹಾಡಿಗಳಿದ್ದು ಈ ಹಾಡಿಗಳಲ್ಲಿ ೯೦ಕ್ಕೂ ಹೆಚ್ಚಿನ ಆದಿವಾಸಿಗಳ ಕುಟುಂಬಗಳು ವಾಸವಿದ್ದು ೪೦೦ಕ್ಕೂ ಹೆಚ್ಚು ಜನಸಂಖ್ಯೆಯಿರುವ ಹಾಡಿಗಳಾಗಿವೆ.
ಈ ಹಾಡಿಗಳಲ್ಲಿ ವಾಸ ಮಾಡುತ್ತಿರುವ ಯಾವುದೇ ಕುಟುಂಬಗಳಿಗೂ ಶೌಚಾಲಯ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ನೀಡಿಲ್ಲ. ಇತ್ತೀಚೆಗೆ ಮುಂಜಾನೆ ವೇಳೆ ಮನೆಯಿಂದ ಹೊರಗೆ ಬಹಿರ್ದೆಸೆಗೆ ತೆರಳುತ್ತಿದ್ದ ವೇಳೆ ಬೊಗ್ಗನಹಡ್ಲು ಹಾಡಿಯ ತಿಮ್ಮ ಎಂಬ ವ್ಯಕ್ತಿಗೆ ಕಾಡುಕೋಣ ತಿವಿದಿದ್ದು ಗಂಭೀರ ಗಾಯಗಳಿಂದ ಆತ ಈಗಾಗಲೇ ಮೈಸೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಡಾನೆ ದಾಳಿಯು ನಡೆದಿದ್ದು ಹಲವು ಆದಿವಾಸಿಗಳಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯ ಮೂಲಕ ಮೂಲ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಲಾಗುವುದು ಎಂದು ಸಂಘಟನೆಯ ಪದಾಧಿಕಾರಿಗಳಾದ ಜೆ.ಜಿ.ಮಣಿ, ಜೆ.ಜಿ.ಸೀತೆ ಹಾಗೂ ಜೆ.ಎಲ್. ಗೌರಿ ತಿಳಿಸಿದ್ದಾರೆ.