ಶ್ರೀಮಂಗಲ, ಆ. ೨೫: ದಿನನಿತ್ಯ ಪಠ್ಯ ಪ್ರವಚನದಲ್ಲಿ ಮುಳುಗಿದ್ದ ಮಕ್ಕಳಿಗೆ ಭತ್ತದ ನಾಟಿ ಕೃಷಿಯ ಬಗ್ಗೆ ಅರಿವು ಆಸಕ್ತಿ ಮೂಡಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹುದಿಕೇರಿಯ ಲಿಟಲ್ ಫ್ಲವರ್ ಆಂಗ್ಲ ಶಾಲೆಯ ಮಕ್ಕಳು ಉತ್ಸಾಹದಲ್ಲಿ ತೊಡಗಿಸಿಕೊಂಡು ಸಂತಸಪಟ್ಟರು.

ಹುದಿಕೇರಿ ಗ್ರಾಮದ ಗದ್ದೆಯಲ್ಲಿ ಸ್ವತಃ ನಾಟಿ ಮಾಡುವ ಮೂಲಕ ವಿಶೇಷ ಅನುಭವದೊಂದಿಗೆ ಸಂಭ್ರಮಿಸಿದರು.ಕೃಷಿ ಹಾಗೂ ರೈತರ ಜೀವನದ ಬಗ್ಗೆ ಹೈಸೊಡ್ಲೊರು ಗ್ರಾಮದ ಪ್ರಗತಿಪರ ರೈತ ಬಲ್ಯಮೀದೇರಿರ ಸಂಜು ಅವರ ಗದ್ದೆಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಗಾರದಲ್ಲಿ ಭತ್ತದ ಉಳುಮೆ, ಬಿತ್ತನೆ ಹಾಗೂ ನಾಟಿ ಮಾಡುವ ಬಗ್ಗೆ ಸಂಜು ಅವರು ಮಕ್ಕಳಿಗೆ ವಿವರಿಸಿದರು.

ಮಕ್ಕಳು ಸ್ವತಃ ಆಸಕ್ತಿಯಿಂದ ಗದ್ದೆಗೆ ಇಳಿದು ನಾಟಿ ಮಾಡಿ ಸಂಭ್ರಮ ಪಟ್ಟರು.ಈ ಸಂದರ್ಭ ಶಾಲೆಯ ಆಡಳಿತ ಮಂಡಳಿ ಪ್ರಮುಖರು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಭಾಗಿಯಾಗಿದ್ದರು.