ಸೋಮವಾರಪೇಟೆ, ಆ. ೨೪ : ಬೆಳೆಗಾರರು ಹಾಗೂ ರೈತರು ಎದುರಿಸುತ್ತಿರುವ ಸಿ.ಮತ್ತು ಡಿ. ಸಮಸ್ಯೆ, ಅರಣ್ಯ ಇಲಾಖೆಯ ನೋಟೀಸ್ ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ತಾಲೂಕು ರೈತ ಹೋರಾಟ ಸಮಿತಿ ವತಿಯಿಂದ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು. ಇಲ್ಲಿನ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಹಾಲ್ನಲ್ಲಿ ನಡೆದ ಸಭೆಗೆ ಆಗಮಿಸಿದ ಎ.ಎಸ್.ಪೊನ್ನಣ್ಣ ಅವರಿಗೆ ಈ ಸಂಬAಧಿತ ಲಿಖಿತ ಮನವಿ ಸಲ್ಲಿಸಲಾಯಿತು.
ಕೊಡಗು ಜಿಲ್ಲೆಯಲ್ಲಿ ಪೈಸಾರಿ ಜಮೀನುಗಳನ್ನು ಸಿ & ಡಿ ಜಮೀನುಗಳೆಂದು, ಅರಣ್ಯ ಇಲಾಖೆಯ ಹೆಸರಿಗೆ ದಾಖಲಿಸಿರುವ ಜಮೀನುಗಳನ್ನು ಮೀಸಲು ಅರಣ್ಯವೆಂದು ಕರ್ನಾಟಕ ಅರಣ್ಯ ಅಧಿನಿಯಮ ೧೯೬೩, ೫ ರ ಪ್ರಕರಣದ ಮೇರೆ ಹೊರಡಿಸಿರುವ ಉದ್ಘೋಷಣೆಯನ್ನು ಹಿಂಪಡೆದು ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ಕೊಡಗು ಜಿಲ್ಲೆಯಲ್ಲಿ ಕೂರ್ಗ್ ಲ್ಯಾಂಡ್ ರೆಜ್ಯುಲೇಶನ್ ೧೮೮೯ ರ ಕಾಯ್ದೆ ಪೂರ್ವದಲ್ಲಿ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ನಿಬಂಧನೆಗಳನ್ನೊಳಗೊAಡAತೆ ರೈತರಿಗೆ ಹಿಡುವಳಿ ಜಮೀನನ್ನು ನೀಡಲಾಗಿರುತ್ತದೆ. ಉಳಿದಂತೆ ದಟ್ಟವಾದ ಅರಣ್ಯ, ಕಾಡು ಬೆಟ್ಟಗುಡ್ಡ ಪ್ರದೇಶಗಳನ್ನು ಅರಣ್ಯ ಜಮೀನೆಂದು ವ್ಯವಸಾಯಕ್ಕೆ ಯೋಗ್ಯವಾದ ಜಮೀನನ್ನು ಪೈಸಾರಿ ಜಮೀನೆಂದು ಗುರುತಿಸಲಾಗಿರುತ್ತದೆ. ಜನಸಂಖ್ಯೆ ಬೆಳೆದಂತೆ ರೈತರು ಪೈಸಾರಿ ಜಮೀನನ್ನು ಭೂ ಮಂಜೂರಾತಿ ಕಾಯ್ದೆ ಅಡಿ ಮಂಜೂರಾತಿ ಮಾಡಿಸಿಕೊಂಡಿರುತ್ತಾರೆ. ಇನ್ನು ಮಂಜೂರಾತಿಗೆ ಅನೇಕ ಅರ್ಜಿಗಳು ಬಾಕಿ ಇರುತ್ತವೆ. ಈ ಎಲ್ಲಾ ಜಮೀನುಗಳು ವ್ಯವಸಾಯಕ್ಕೆ ಯೋಗ್ಯವಾದ ಜಮೀನುಗಳಾಗಿದ್ದು, ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೋರಾಟ ಸಮಿತಿ ಪದಾಧಿಕಾರಿಗಳು ಶಾಸಕರ ಗಮನ ಸೆಳೆದರು.
ಅರಣ್ಯ ಜಮೀನನ್ನು ಹೆಚ್ಚಿಗೆ ಮಾಡುವ ಉದ್ದೇಶದಿಂದ ಸರ್ಕಾರದ ಆದೇಶದಂತೆ, ಸರ್ಕಾರದ ಹೆಸರಿನಲ್ಲಿ ದಾಖಲಿರುವ ವ್ಯವಸಾಯಕ್ಕೆ ಯೋಗ್ಯವಲ್ಲದ ಜಮೀನುಗಳನ್ನು ಸಿ ಮತ್ತು ಡಿ ಜಮೀನುಗಳೆಂದು ವರ್ಗೀಕರಿಸಿ ಅಂತಹ ಜಮೀನುಗಳನ್ನು ಮಾತ್ರ ಅರಣ್ಯ ಇಲಾಖೆಗೆ ವರ್ಗಾಯಿಸುವಂತೆ ಆದೇಶವಾಗಿರುತ್ತದೆ. ಈ ಆದೇಶಕ್ಕೆ ವಿರುದ್ಧವಾಗಿ ಅಧಿಕಾರಿಗಳು, ಸರ್ಕಾರದ ಹೆಸರಿನಲ್ಲಿ ಇರುವ ಎಲ್ಲಾ ಪೈಸಾರಿ ಜಮೀನುಗಳನ್ನು ಸ್ಥಳ ತನಿಖೆ ಮಾಡದೇ ಪಟ್ಟಿಮಾಡಿ ಸಿ ಮತ್ತು ಡಿ ಜಮೀನುಗಳೆಂದು ಸರ್ಕಾರಕ್ಕೆ ವರದಿ ಮಾಡಿರುತ್ತಾರೆ. ಸಿ ಮತ್ತು ಡಿ ವರ್ಗದ ಜಮೀನುಗಳೆಂದು ಗುರುತಿಸಿರುವ ಜಮೀನುಗಳಲ್ಲಿ ರೈತರು ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೋರಾಟ ಸಮಿತಿ ಸಂಚಾಲಕ ಸುರೇಶ್ ತಿಳಿಸಿದರು.
ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ರಾಷ್ಟ್ರದ ೮ ರಾಜ್ಯಗಳ ಪೈಕಿ ಕರ್ನಾಟಕ ಸಹ ಸಂಕಷ್ಟಕ್ಕೆ ಸಿಲುಕಲಿದೆ. ಕರ್ನಾಟಕದ ೧೫೫೩ ಗ್ರಾಮಗಳು ಕೊಡಗಿನ ಮೂಲ ನಿವಾಸಿಗಳು, ರೈತ, ಬೆಳೆಗಾರರು, ಅನಾದಿ ಕಾಲದಿಂದ ಉಳಿಸಿ, ಬೆಳೆಸಿಕೊಂಡು ಬಂದಿರುವ ಸಂಸ್ಕೃತಿ, ಗ್ರಾಮೀಣ ಬದುಕು ಕಣ್ಮರೆಯಾಗಲಿದೆ. ಯಾವುದೇ ಮಾಹಿತಿ ನೀಡದೇ, ಜಂಟಿ ಸರ್ವೆ ನಡೆಸದೆ, ಸಿ ಮತ್ತು ಡಿ ಭೂಮಿ ವ್ಯವಸಾಯಕ್ಕೆ ಯೋಗ್ಯವಲ್ಲದ ಜಮೀನು ಎಂದು ಏಕಾಏಕಿ ಅಧಿಕಾರಿ ವರ್ಗ ನೀಡಿದ ಅವೈಜ್ಞಾನಿಕ ಸರ್ವೆ ನಡೆಸಿ, ಏಕಪಕ್ಷೀಯವಾಗಿ ವರದಿಯನ್ನು ನೀಡಿದ್ದು, ಕೊಡಗಿನ ನಿವಾಸಿಗಳಿಗೆ, ಮರಣಶಾಸನ ಬರೆಯಲು ತಯಾರಿ ಮಾಡಿ ರಕ್ಷಿತ ಅರಣ್ಯ ಎಂಬ ಪದ ಸೇರಿಸಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎಂದು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ದೂರಿದರು.
ಕಂದಾಯ ಇಲಾಖೆಯ ಹೆಸರಿನಿಂದ ಸಿ ಮತ್ತು ಡಿ ಜಮೀನೆಂದು ವರ್ಗೀಕರಣವಾದ ಅರಣ್ಯ ಇಲಾಖೆಯ ಹೆಸರಿಗೆ ದಾಖಲಾಗಿರುವ, ಜಮೀನುಗಳನ್ನು ರದ್ದು ಮಾಡಿ ಕಂದಾಯ ಇಲಾಖೆಯ ಹೆಸರಿಗೆ ದಾಖಲಿಸಬೇಕು. ಕಂದಾಯ ಇಲಾಖೆಯವರು ಮತ್ತು ಅರಣ್ಯ ಇಲಾಖೆಯವರು ಜಂಟಿ ಸ್ಥಳ ತನಿಖೆ ಮಾಡಿ ಸಿ ಮತ್ತು ಡಿ ಜಮೀನುಗಳೆಂದು ವರ್ಗೀಕರಿಸಿರುವ ಜಮೀನುಗಳೆಲ್ಲ ದಟ್ಟವಾದ ನೆಡುತೋಪು, ಅರಣ್ಯ ಪ್ರದೇಶ, ಕಲ್ಲು ಮಂಟಿ ಗುಡ್ಡ ಪ್ರದೇಶಗಳನ್ನು ಗುರುತಿಸಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಛೇರಿಯ ಸಿಬ್ಬಂದಿಯವರಿAದ ಸರ್ವೆ ಮಾಡಿಸಿ ಅಂತಹ ಪ್ರದೇಶಗಳಿಗೆ ಮಾತ್ರ ಪಟ್ಟಿ ಮಾಡಿ ಮೇಲಧಿಕಾರಿಗಳವರಿಗೆ ಕಳುಹಿಸಿ ಅಲ್ಲಿಂದ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಅರಣ್ಯ ಜಮೀನೆಂದು ಉದ್ಘೋಷಣೆ ಮಾಡಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ಈ ವಿಷಯಕ್ಕೆ ಸಂಬAಧಿಸಿದAತೆ ಸುಪ್ರಿಂ ಕೋರ್ಟ್ನಲ್ಲಿ ವ್ಯಾಜ್ಯ ಇದ್ದು, ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಮೂರು ಎಕರೆವರೆಗಿನ ರೈತರು ಭೂಮಿಗೆ ದಾಖಲಾತಿ ಇಲ್ಲದಿದ್ದರೂ, ಯಾವುದೇ ಭಯಬೇಡ. ಉಳಿದವರಿಂದ ಮೂರು ಎಕರೆ ಹೊರತು ಪಡಿಸಿ ಉಳಿದ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇನ್ನುಳಿದಂತೆ ಊರುಡುವೆ, ದೇವರಕಾಡು, ಅರಣ್ಯ ಪ್ರದೇಶ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ರೈತ ಮುಖಂಡರುಗಳಾದ ಬಿ.ಜೆ. ದೀಪಕ್, ಎಸ್.ಜಿ. ಮೇದಪ್ಪ, ಎ.ಆರ್. ಮುತ್ತಣ್ಣ, ಕೆ.ಎಂ. ಲೋಕೇಶ್, ಹೂವಯ್ಯ, ಎಚ್.ಈ. ರಮೇಶ್ ರಾಜಪ್ಪ ಮತ್ತಿತರರು ಇದ್ದರು.