ಮಡಿಕೇರಿ, ಆ. ೨೪: ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳ ಮೇಲ್ವಿಚಾರಕರ ಸಂಘ ಹಾಗೂ ಕೊಡಗು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳ ಮೇಲ್ವಿಚಾರಕರ ಸಹಯೋಗದೊಂದಿಗೆ ಇತ್ತೀಚೆಗೆ ನಿವೃತ್ತಿಯಾದ ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯಾಧಿಕಾರಿ ಲೀಲಾವತಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಮಡಿಕೇರಿಯ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಲಾಗಿತ್ತು.
೨೦೦೮ರಲ್ಲಿ ಮಡಿಕೇರಿ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಸೇವೆ ಆರಂಭಿಸಿದ ಲೀಲಾವತಿ ಅವರು ಸುಮಾರು ೧೬ ವರ್ಷಗಳ ಕಾಲ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದು, ಹಿರಿಯ ಮೇಲ್ವಿಚಾರಕರಾದ ಶಾಂತಾ ಆರ್.ಕೆ., ಮೊಣ್ಣಪ್ಪ ಎನ್.ಜಿ., ಕಮಲಾಕ್ಷಿ, ಜಲಜಾಕ್ಷಿ ಎಸ್.ಬಿ. ಮತ್ತು ರಾಜು ಕೆ.ಆರ್.. ಹಾಗೂ ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಶೇಖರ್ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಶೇಖರ್ ಅವರು ಮಾತನಾಡಿ, ಲೀಲಾವತಿ ಅವರ ಕಾರ್ಯವೈಖರಿಯಲ್ಲಿನ ಬದ್ಧತೆ, ಶ್ರದ್ಧೆ, ಸಮಯ ಪ್ರಜ್ಞೆ, ಪ್ರಾಮಾಣಿಕತೆ, ನಿಷ್ಠೆಯನ್ನು ಶ್ಲಾಘಿಸಿದರು.
ಲೀಲಾವತಿ ಅವರು ಮಾತನಾಡಿ, ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಪ್ರೀತಿ-ವಿಶ್ವಾಸವನ್ನು ಗಳಿಸಲು ಪ್ರಯತ್ನಿಸಬೇಕು ಎಂದು ಮೇಲ್ವಿಚಾರಕರಿಗೆ ಕಿವಿಮಾತು ಹೇಳಿದರು. ಗ್ರಂಥಾಲಯವು ಇಲ್ಲಿಯವರೆಗೆ ಮೇಲ್ವಿಚಾರಕರ ಮತ್ತು ಸಾರ್ವಜನಿಕರ ಸಂಪರ್ಕ ಸೇತುವೆಯಾಗಿತ್ತು. ಆದರೆ, ಇದೀಗ ಈ ಪಟ್ಟಿಗೆ ವಿದ್ಯಾರ್ಥಿಗಳು ಕೂಡಾ ಸೇರ್ಪಡೆಗೊಂಡಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಮೇಲ್ವಿಚಾರಕರು ಅತ್ಯಂತ ಶ್ರದ್ಧೆಯಿಂದ ಮತ್ತು ತಾಳ್ಮೆಯಿಂದ ಕಾರ್ಯ ನಿರ್ವಹಿಸ ಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯದ ನೂತನ ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಸುರೇಖಾ, ಮಡಿಕೇರಿ ಜಿಲ್ಲಾ ಗ್ರಂಥಾಲಯದ ಗ್ರಂಥಪಾಲಕಿ ನೇತ್ರಾವತಿ, ಸಹಾಯಕ ಗ್ರಂಥಪಾಲಕ ವಿಜಯ್ ನಾಗ್, ಕೊಡಗು ಜಿಲ್ಲಾ ಗ್ರಾಮ ಡಿಜಿ ವಿಕಸನದ ತರಬೇತಿಯ ಸಂಯೋಜಕ ರಕ್ಷಿತ್ ಮತ್ತು ದಿಲೀಪ್ ಅವರುಗಳು ಮಾತನಾಡಿದರು. ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಾಯಕ ಗ್ರಂಥಪಾಲಕ ವಿಜಯ್ ನಾಗ್ ಅವರು ಅನುವಾದ ಮಾಡಿ ಬರೆದಿರುವ "ಹೃದಯ" ಎಂಬ ಕಾದಂಬರಿ ಪುಸ್ತಕವನ್ನು ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳ ಮೇಲ್ವಿಚಾರಕರ ಸಂಘದ ಅಧ್ಯಕ್ಷ ಜಿ.ಪಿ. ಚೇತನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಬಿ.ವಿ. ಸರಸ್ವತಿ, ಪ್ರಧಾನ ಕಾರ್ಯದರ್ಶಿಗಳಾದ ಯೋಗೀಶ್ ಜಿ.ಆರ್., ಖಜಾಂಚಿ ದಿವ್ಯಾ ಎಸ್.ಪಿ., ಕಾರ್ಯದರ್ಶಿಗಳಾದ ಕೋಮಲ ಟಿ.ಬಿ., ಜಂಟಿ ಕಾರ್ಯದರ್ಶಿ ಕವಿತಾ ಡಿ.ಜೆ. ಹಾಗೂ ಸಂಘಟನಾ ಕಾರ್ಯದರ್ಶಿ ಕೆ.ವಿ. ಸುಜೀತಾ ಉಪಸ್ಥಿತರಿದ್ದರು.
ಜಲಜಾಕ್ಷಿ ಎಸ್.ಬಿ. ಪ್ರಾರ್ಥಿಸಿದರು. ರೆನಿ ಓ.ಎಫ್. ಸ್ವಾಗತಿಸಿದರು. ವಸಂತಿ ಹೆಚ್.ಎ. ಲೀಲಾವತಿ ಅವರ ಕಿರು ಪರಿಚಯ ಮಾಡಿದರು. ರೂಪ ವೈ.ಎನ್. ಕಾರ್ಯಕ್ರಮ ನಿರೂಪಿಸಿದರು. ಕಮಲಾಕ್ಷಿ ಕೆ.ಎಂ. ವಂದಿಸಿದರು.