ಸೋಮವಾರಪೇಟೆ, ಆ. ೨೩: ಸ್ವಾತಂತ್ರö್ಯ ಬಂದ ನಂತರದ ಏಳೂವರೆ ದಶಕದಲ್ಲಿ ಇದೇ ಪ್ರಥಮ ಬಾರಿಗೆ ಮುಟ್ಲು ಗ್ರಾಮಕ್ಕೆ ಸರ್ಕಾರಿ ಬಸ್ ತೆರಳಿದ್ದು, ಗ್ರಾಮಸ್ಥರಲ್ಲಿ ಹರ್ಷ ತಂದಿದೆ.

ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಟ್ಲು ಗ್ರಾಮ ಹಲವಷ್ಟು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಸರ್ಕಾರಿ ಬಸ್ ಸೇವೆಯೂ ಈ ಪಟ್ಟಿಯಲ್ಲಿತ್ತು. ಇದೀಗ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಸೂಚನೆಯಂತೆ ಗ್ರಾಮಕ್ಕೆ ಬಸ್ ಸೇವೆ ಒದಗಿ ಬಂದಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಕೆಲವು ವರ್ಷಗಳವರೆಗೆ ಒಂದು ಖಾಸಗಿ ಬಸ್ ಬರುತ್ತಿತ್ತಾದರೂ, ಅದರ ಸೇವೆ ನಿಂತು ಹಲವು ವರ್ಷಗಳೇ ಕಳೆದಿವೆ. ವಯೋವೃದ್ದರೇ ಅಧಿಕವಿರುವ ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆಗಾಗಿ ಗ್ರಾಮಸ್ಥರು ಹತ್ತಾರು ವರ್ಷಗಳಿಂದ ಕಚೇರಿಗಳಿಗೆ ಅಲೆದು ಬಸವಳಿದಿದ್ದರು. ನೊಂದ ಗ್ರಾಮಸ್ಥರು ಕೊಡಗು ತುರ್ತು ಸ್ಪಂದನ ಬಳಗದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು, ಪ್ರಮುಖರಾದ ಚಾಮೇರ ದಿನೇಶ್ ಬೆಳ್ಯಪ್ಪ ಅವರು, ಮಡಿಕೇರಿ ಶಾಸಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಕೋರಿದ್ದರು.

ಸತತ ಪ್ರಯತ್ನದ ಫಲವಾಗಿ ಶಾಸಕರ ಸೂಚನೆಯ ಮೇರೆಗೆ ಸರ್ಕಾರಿ ಬಸ್ ಪ್ರಾರಂಭವಾಗಿದ್ದು, ಗ್ರಾಮಕ್ಕೆ ಆಗಮಿಸಿದ ಬಸ್‌ಗೆ ಪೂಜೆ ಸಲ್ಲಿಸಿ, ಖುಷಿಯಿಂದ ಬರಮಾಡಿಕೊಂಡರು. ಈ ಬಸ್ ಮಡಿಕೇರಿ, ಮಾದಪುರ, ಸೂರ್ಲಬ್ಬಿ, ಮುಟ್ಲು ಗ್ರಾಮದ ಮೂಲಕ ಸೋಮವಾರಪೇಟೆಗೆ ಆಗಮಿಸಿ, ಅದೇ ಮಾರ್ಗವಾಗಿ ವಾಪಸ್ ತೆರಳಲಿದ್ದು, ಈ ಭಾಗದ ಸಾರ್ವಜನಿಕರು, ವಿಶೇಷವಾಗಿ ಮುಟ್ಲು ಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಿದಂತಾಗಿದೆ.