ಮುಳ್ಳೂರು, ಆ. ೨೩: ಸಮೀಪದ ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ವತಿಯಿಂದ ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟದ ತುದಿಗೆ ಹೋಗುವ ರಸ್ತೆ ಬೆಟ್ಟದ ತುದಿಯಲ್ಲಿರುವ ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ರೋಟರಿ ಕ್ಲಬ್ ಸದಸ್ಯರು ಮತ್ತು ಮಾಲಂಬಿ ಗ್ರಾಮಸ್ಥರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ದೇವಸ್ಥಾನಕ್ಕೆ ಹೋಗುವ ರಸ್ತೆಯುದ್ದಕ್ಕೂ ಇದ್ದ ತ್ಯಾಜ್ಯವನ್ನು ತೆಗೆದರು. ನಂತರ ಬೆಟ್ಟದ ಮೇಲಿರುವ ದೇವಸ್ಥಾನದ ಸುತ್ತಮುತ್ತ ಹರಡಿದ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಿದರು.

ಸ್ವಚ್ಛತಾ ಕಾರ್ಯಕ್ರಮದ ಕುರಿತು ಮಾತನಾಡಿದ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಟಿ.ವಿ.ದಯಾನಂದ್ ರೋಟರಿ ಸಂಸ್ಥೆ ಸ್ವಚ್ಛತೆ, ಪರಿಸರ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಮಾಜ ಸೇವಾ ಸಂಸ್ಥೆಯಾಗಿದೆ ಎಂದರು.

ರೋಟರಿ ಸಂಸ್ಥೆಯ ಕಾರ್ಯದರ್ಶಿ ಕಿರಣ್, ರೋಟರಿ ಪದಾಧಿಕಾರಿಗಳು, ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.