ಕುಶಾಲನಗರ, ಆ. ೨೩: ನಾಡು ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರ ಪರಿಶ್ರಮದ ಫಲವಾಗಿ ಕುಶಾಲನಗರ ಅಭಿವೃದ್ಧಿಯ ನಾಗಾಲೋಟದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು.

ಕುಶಾಲನಗರದ ಸಮಾನ ಮನಸ್ಕರ ವೇದಿಕೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಗುಂಡೂರಾವ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗುಂಡೂರಾವ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕಳೆದ ಮೂರು ದಶಕಗಳ ಹಿಂದೆಯೇ ಮುಂದಿನ ಮುವತ್ತು ವರ್ಷಗಳ ದೂರದೃಷ್ಟಿ ಹೊಂದುವ ಮೂಲಕ ಸಾಕಷ್ಟು ಅಭಿವೃದ್ಧಿಯ ಪರ್ವವನ್ನು ಆರಂಭಿಸಿದ ಗುಂಡೂರಾವ್ ಅವರನ್ನು ಊರು ನಿತ್ಯವೂ ಸ್ಮರಿಸುವಂತಹ ಅವರ ಪ್ರತಿಮೆಯನ್ನು ಕುಶಾಲನಗರದ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಬೇಕಿದೆ ಎಂದು ಹೇಳಿದರು.

ಕುಶಾಲನಗರದ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್ ಮಾತನಾಡಿ, ಗುಂಡೂರಾವ್ ಅವರ ಹೆಸರು ಕುಶಾಲನಗರ ಊರಿನೊಂದಿಗೆ ತಳುಕು ಹಾಕಿಕೊಂಡಿರುವುದರಿAದ ಅವರ ಹೆಸರನ್ನು ಊರಿನವರು ಒಗ್ಗೂಡಿ ಚಿರಸ್ಥಾಯಿ ಗೊಳಿಸಬೇಕೆಂದರು.

ಕುಶಾಲನಗರದ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಮಾತನಾಡಿ, ಗುಂಡೂರಾವ್ ಕುಶಾಲನಗರಕ್ಕೆ ಮಾಡಿದ ಅಭಿವೃದ್ಧಿ ಯೋಜನೆಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಗುಂಡೂರಾವ್ ನಂತರದ ಯಾವುದೇ ರಾಜಕಾರಣಿಗಳು, ಜನಪ್ರತಿನಿಧಿಗಳಿಂದ ಕುಶಾಲನಗರದ ವಿಶೇಷ ಪ್ರಗತಿ ಸಾಧ್ಯವಾಗಿಲ್ಲ ಎಂದರು.

ಸಮಾನ ಮನಸ್ಕ ವೇದಿಕೆ ಸಂಚಾಲಕ ಕೆ.ಎಸ್. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಗುಂಡೂರಾವ್ ಕಟ್ಟಿ ಬೆಳೆಸಿದ ಕುಶಾಲನಗರದಲ್ಲಿ ಬದುಕು ಕಟ್ಟಿರುವ ಪ್ರತಿಯೊಬ್ಬರು ಅವರನ್ನು ಸ್ಮರಿಸಬೇಕು.

ಆ ಕಾಲ ಘಟ್ಟದಲ್ಲಿಯೇ ಶುದ್ಧ ಕಾವೇರಿ ಕುಡಿವ ನೀರಿನ ಯೋಜನೆ, ಕೈಗಾರಿಕಾ ಬಡಾವಣೆ ಹೀಗೆ ಅನೇಕ ಯೋಜನೆ ಜಾರಿಗೆ ತಂದ ನೇತಾರ ಎಂದಿಗೂ ಸ್ಮರಣೀಯ ಎಂದರು.

ಕಾವೇರಿ ನದಿ ಸಂರಕ್ಷಣಾ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಕುಶಾಲನಗರ ಜಿಲ್ಲೆಯಲ್ಲಿಯೇ ವೇಗದಲ್ಲಿ ಅಭಿವೃದ್ಧಿ ಹೊಂದಲು ಕಾರಣೀಭೂತರಾಗಿರುವ ದಿ. ಗುಂಡೂರಾವ್ ಅವರ ಜನ್ಮ ಜಯಂತಿ ಹಾಗೂ ಸ್ಮರಣೆ ಕಾರ್ಯಕ್ರಮಗಳನ್ನು ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಪ್ರತೀ ವರ್ಷ ರೂಪಿಸಬೇಕು.

ಕುಶಾಲನಗರಕ್ಕೆ ಕಾಲಿಡುವ ಪ್ರತಿಯೊಬ್ಬರು ಸ್ಮರಣೆ ಮಾಡುವ ರೀತಿಯಲ್ಲಿ ಗುಂಡೂರಾವ್ ಪ್ರತಿಮೆಯನ್ನು ಪಟ್ಟಣದ ದ್ವಾರದಲ್ಲಿ ನಿರ್ಮಿಸಬೇಕೆಂದರು.

ಉದ್ಯಮಿ ಮಂಜುನಾಥ ಗುಂಡೂರಾವ್, ಎಸ್.ಎನ್. ರಾಜೇಂದ್ರ, ಪುರಸಭೆ ಸದಸ್ಯ ಬಿ. ಅಮೃತರಾಜು, ಮಾಜಿ ಸದಸ್ಯ ಎಂ. ನಂಜುAಡಸ್ವಾಮಿ ಮಾತನಾಡಿದರು. ಮಾಜಿ ಸದಸ್ಯ ಕೆ.ಜಿ. ಮನು, ಕಲಾವಿದ ರಾಜು, ಮಂಜುನಾಥ್, ಪ್ರಕಾಶ್, ಗಯಾಜ್ ಇದ್ದರು.