ಮಡಿಕೇರಿ, ಆ. ೨೨ : ವನ್ಯಜೀವಿಗಳ ಜೀವನ ಕುರಿತು ಸೂಕ್ತ ಮಾಹಿತಿ ಮತ್ತು ಅಪಾರವಾದ ತಾಳ್ಮೆಯಿದ್ದಲ್ಲಿ ಉತ್ತಮ ವನ್ಯಜೀವಿ ಛಾಯಾಗ್ರಾಹಕರಾಗಲು ಸಾಧ್ಯ ಎಂದು ವನ್ಯಜೀವಿ ಛಾಯಾಗ್ರಾಹಕಿ ಛಾಯಾ ಸುನೀಲ್ ಅಭಿಪ್ರಾಯಪಟ್ಟಿದ್ದಾರೆ,

ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿಹಿಲ್ಸ್ ನಿಂದ ವಿಶ್ವಛಾಯಾಗ್ರಹಣ ದಿನದ ಅಂಗವಾಗಿ ನಡೆದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಮಾತನಾಡಿದ ಹನಗೋಡು ಗ್ರಾಮದ ವನ್ಯಜೀವಿ ಛಾಯಾಗ್ರಾಹಕಿ ಛಾಯಾ ಸುನೀಲ್, ತಾನೋರ್ವ ಶಿಕ್ಷಕಿಯಾಗಿ ವನ್ಯಜೀವಿಗಳ ಕುರಿತು ಸಾಕಷ್ಟು ಕುತೂಹಲ ಹೊಂದಿದ್ದೆ, ಕಾಡು ಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷದ ಬಗ್ಗೆಯೂ ಅನೇಕ ಪ್ರಶ್ನೆಗಳೂ ಮನದಲ್ಲಿದ್ದವು, ಕೆಲವೇ ವರ್ಷಗಳ ಹಿಂದೆ ಈ ಎಲ್ಲಾ ಸಂಶಯಗಳಿಗೆ ಪರಿಹಾರರೂಪವಾಗಿ ಅರಣ್ಯ ಜೀವಿಗಳ ಜೀವನ ಅಧ್ಯಯನ ಮಾಡಲು ಮುಂದಾಗಿದ್ದೆ. ಆಗ ಜೊತೆಯಾದ ಛಾಯಾಗ್ರಹಣ ಹವ್ಯಾಸವೇ ವನ್ಯಜೀವಿಗಳ ಅದ್ಭುತ ಲೋಕದತ್ತ ತನ್ನನ್ನು ಸಾಗುವಂತೆ ಮಾಡಿತು ಎಂದು ಛಾಯಾ ಸುನಿಲ್ ಹೇಳಿದರು.

ವನ್ಯಜೀವಿ ಛಾಯಾಗ್ರಹಣಕ್ಕೆ ವನ್ಯಜೀವಿಗಳ ಜೀವನ ಕ್ರಮದ ಬಗ್ಗೆ ಸೂಕ್ತ ತಿಳುವಳಿಕೆ ಮತ್ತು ಅಪಾರವಾದ ತಾಳ್ಮೆಯ ಅಗತ್ಯವಿದೆ, ಕೆಲವೊಂದು ಛಾಯಾಚಿತ್ರ ತೆಗೆಯಲು ವಾರಗಟ್ಟಲೆ ಮಾತ್ರವಲ್ಲ ತಿಂಗಳಾನುಗಟ್ಟಲೆ ಕಾಯಬೇಕಾಗುತ್ತದೆ, ಹೀಗೆ ಕಾದಾಗಲೇ ಅತ್ಯುದ್ಭುತ ಛಾಯಾಚಿತ್ರಗಳನ್ನು ತೆಗೆಯಲು ಸಾಧ್ಯವಾಗುತ್ತದೆ ಎಂದು ಛಾಯಾ ಸುನೀಲ್ ಹೇಳಿದರು, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮಾತನಾಡಿ, ವಿಶ್ವದಾದ್ಯಂತ ಇರುವ ಛಾಯಾಗ್ರಾಹಕರ ಶ್ರಮವನ್ನು ಗುರುತಿಸಲು ರೋಟರಿಯಿಂದ ಛಾಯಾಗ್ರಹಣ ಮಹತ್ವದ ಬಗೆಗಿನ ಕಾರ್ಯಕ್ರಮ ಆಯೋಜಿಸಿರುವುದಾಗಿ ನುಡಿದರು, ಕಾರ್ಯಕ್ರಮ ಸಂಚಾಲಕ ಅನಿಲ್ ಎಚ್.ಟಿ. ನಿರೂಪಿಸಿದ ಕಾರ್ಯಕ್ರಮದಲ್ಲಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್ ವಂದಿಸಿ, ನಿರ್ದೇಶಕರಾದ ಎಂ, ಧನಂಜಯ್, ಗಾನಾ ಪ್ರಶಾಂತ್ , ಶಂಕರ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ೩೦೦ ಕ್ಕೂ ಅಧಿಕ ವನ್ಯಜೀವಿಗಳ ಛಾಯಾಚಿತ್ರಗಳ ಪ್ರದರ್ಶನ ಮನಸೆಳೆಯಿತು.