ಮಡಿಕೇರಿ, ಆ. ೨೨: ಹಿಂದುಳಿದ ಆಯೋಗ ಸ್ಥಾಪನೆ, ಭೂ ಸುಧಾರಣೆ ಕಾಯ್ದೆ, ಜನತಾ ನ್ಯಾಯಾಲಯ, ಜೀತ ವಿಮುಕ್ತಿ ಸೇರಿದಂತೆ ಹಲವು ಸಾಮಾಜಿಕ ಕಳಕಳಿಯ ಜನಪರ ಕಾರ್ಯಕ್ರಮಗಳನ್ನು ಜಾರಿ ತಂದ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ದಿ. ಡಿ. ದೇವರಾಜು ಅರಸು ಅವರು ಜನಮಾನಸದಲ್ಲಿ ಸದಾ ನೆಲೆಸಿರುತ್ತಾರೆ ಎಂದು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ಅವರು ಶ್ಲಾಘಿಸಿದ್ದಾರೆ. ಅಹಿಂದ ಒಕ್ಕೂಟ ಮತ್ತು ಸಹಮತ ವೇದಿಕೆಯ ಜಂಟಿ ಆಶ್ರಯದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಾಮಾಜಿಕ ನ್ಯಾಯದ ಹರಿಕಾರ ದಿ.ಡಿ. ದೇವರಾಜು ಅರಸು ಅವರ ೧೦೯ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಹಿಂದ ಒಕ್ಕೂಟದ ಸ್ಥಾಪಕರು ಹಾಗೂ ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಹಿಂದುಳಿದ ವರ್ಗ, ದುರ್ಬಲ ವರ್ಗ, ಅಲ್ಪಸಂಖ್ಯಾತರ ಏಳಿಗೆಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ದೇವರಾಜು ಅರಸು ಅವರಿಗೆ ಸಲ್ಲುತ್ತದೆ ಎಂದರು.

ಕೊಡಗಿನಲ್ಲಿ ಅಹಿಂದ ಒಕ್ಕೂಟ ಅಸ್ತಿತ್ವಕ್ಕೆ ತರುವ ಮೂಲಕ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಹಲವು ಗ್ರಾ.ಪಂ ವ್ಯಾಪ್ತಿಯಲ್ಲಿ ಮನೆ ಕಳೆದುಕೊಂಡವರಿಗೆ ಅದೇ ಗ್ರಾ.ಪಂ ವ್ಯಾಪ್ತಿಯಲ್ಲಿ ಮನೆಯನ್ನು ನಿರ್ಮಿಸಿಕೊಡುವ ಅವಶ್ಯಕತೆ ಇದೆ ಎಂದರು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಹೆಚ್. ಮುಸ್ತಫ ಅವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಅದ್ಭುತ ವ್ಯಕ್ತಿಯಾಗಿದ್ದು, ಜಾತ್ಯತೀತತೆಯ ನೆಲೆಗಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಭೂ ಒಡೆತನ, ಮೀಸಲಾತಿ ಸೌಲಭ್ಯಗಳನ್ನು ಕಲ್ಪಿಸಿ ಶೋಷಿತ ಸಮುದಾಯಗಳಿಗೆ ಅಸ್ಮಿತೆಯನ್ನು ತಂದುಕೊಟ್ಟ ಅರಸು ಅವರು ಸಾಮಾಜಿಕ ಕ್ರಾಂತಿಯ ಹರಿಕಾರ ಎಂದರು.

ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಸುಭಾಷ್ ನಾಣಯ್ಯ ಅವರು ಮಾತನಾಡಿ, ದಿವಗಂತ ಡಿ.ದೇವರಾಜು ಅರಸು ಅವರ ಬದುಕಿನ ಬಗ್ಗೆ ಸ್ಮರಿಸಿದರು.

ವಕೀಲ ಕುಞಬ್ದುಲ್ಲಾ ಮಾತನಾಡಿ, ಸಂವಿಧಾನವನ್ನು ಯಥಾವತ್ತಾಗಿ ಜಾರಿಗೆ ತಂದಾಗ ಮಾತ್ರ ಎಲ್ಲರೂ ದೇಶವನ್ನು ಆಳುವ ದೊರೆಗಳಾಗಲು ಸಾಧ್ಯ. ಆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಸಂಘಟನೆಯ ಮುಖಂಡರುಗಳನ್ನು ಒಗ್ಗೂಡಿಸಿ ಅಹಿಂದವನ್ನು ಬಲಪಡಿಸಬೇಕು ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಹೆಚ್.ಎಲ್. ದಿವಾಕರ್, ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಎಂ. ಮುದ್ದಯ್ಯ, ಸರ್ಕಾರಿ ನೋಟರಿ ಹಾಗೂ ವಕೀಲರಾದ ಬಿ.ಇ. ಜಯೇಂದ್ರ, ಕೊಡಗು ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ, ಪ್ರತಿ ಗ್ರಾಮಗಳಿಗೆ ತೆರಳಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಅಹಿಂದ ಒಕ್ಕೂಟವನ್ನು ಮತ್ತಷ್ಟು ಬಲಪಡಿಸಬೇಕು, ಆ ಮೂಲಕ ಜಿಲ್ಲೆಯಲ್ಲಿ ಅಹಿಂದ ಒಕ್ಕೂಟ ದೊಡ್ಡ ಶಕ್ತಿಯಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರೆಹಮಾನ್ ಹಾಗೂ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು. ಸಹಮತ ವೇದಿಕೆಯ ರೇವತಿ ರಮೇಶ್ ಸ್ವಾಗತಿಸಿ, ಎಸ್.ಐ. ಮುನೀರ್ ಅಹಮ್ಮದ್ ನಿರೂಪಿಸಿ, ವಂದಿಸಿದರು.

ಪ್ರೇಮ, ವೀಣಾಕ್ಷಿ, ಪ್ರೇಮ ಕೃಷ್ಣಪ್ಪ, ಮುಬಿನಾ, ವಾಸುದೇವ್, ಶಬರೀಶ್ ಸನ್ಮಾನಿತರ ಪರಿಚಯ ಮಾಡಿದರು.

ಸನ್ಮಾನಿತರು

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಹಾಗೂ ನಿವೃತ್ತ ಶಿಕ್ಷಕ ಎನ್. ವೀರಭದ್ರಯ್ಯ, ಸಮಾಜ ಸೇವಕ, ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು, ರಕ್ತದಾನಿ ಹಾಗೂ ಭಾಗಮಂಡಲ ಪೊಲೀಸ್ ಇಲಾಖೆಯ ಹೆಡ್‌ಕಾನ್ಸ್ಟೇಬಲ್ ಬಿ.ಎಂ. ರಾಮಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ.ಆದಂ, ಸಮಾಜ ಸೇವಕ ಹಾಗೂ ವಕೀಲರಾದ ಕೆ.ವಿ.ಸುನಿಲ್, ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷೆ ಚಳಿಯಂಡ ಕಮಲ ಉತ್ತಯ್ಯ ಮತ್ತು ಎಸ್.ಎಸ್.ಎಲ್‌ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕಪಡೆದ ಜಿಲ್ಲೆಯ ವಿದ್ಯಾರ್ಥಿಗಳಾದ ಐಗೂರು ಸರ್ಕಾರಿ ಪ್ರೌಢಶಾಲೆಯ ಸಿ.ಬಿ. ಬೆಸಿಲ್ (ಪರವಾಗಿ ಸಹೋದರಿ), ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆ.ಆರ್. ಬಬಿತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.