ಗೋಣಿಕೊಪ್ಪಲು, ಆ. ೨೧: ಇತ್ತೀಚೆಗೆ ಸುರಿದ ಮಳೆಯಿಂದ ರೈತರು ಕಷ್ಟಕ್ಕೆ ಸಿಲುಕಿದ್ದರೂ ಜಿಲ್ಲೆಯ ಹಲವು ಬ್ಯಾಂಕ್ಗಳಲ್ಲಿ ಸಾಲ ಪಡೆದಿರುವ ರೈತರು ಸಾಲ ಮರು ಪಾವತಿಸುವಂತೆ ಒತ್ತಾಯಿಸಿ, ಬ್ಯಾಂಕ್ಗಳು ನ್ಯಾಯಾಲಯದ ಮೂಲಕ ನೋಟಿಸ್ ಜಾರಿಗೊಳಿಸಿ ರೈತರಿಗೆ ಮಾನಸಿಕವಾಗಿ ಕಿರುಕುಳ ನೀಡುವುದರೊಂದಿಗೆ ಹಣ ಪಾವತಿಸುವಂತೆ ಒತ್ತಾಯಿಸುತ್ತಿರುವ ಬಗ್ಗೆ ನೊಂದ ರೈತರು ರೈತ ಸಂಘದ ಬಳಿ ನೋವನ್ನು ತೋಡಿಕೊಂಡರು. ಈ ಹಿನ್ನೆಲೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ಹಾಗೂ ಪದಾಧಿಕಾರಿಗಳು ಜಿಲ್ಲಾ ಕೇಂದ್ರ ಮಡಿಕೇರಿಗೆ ತೆರಳಿ ಲೀಡ್ ಬ್ಯಾಂಕ್ನ ಮುಖ್ಯಸ್ಥರಾದ ಗಂಗಾಧರ್ ಅವರನ್ನು ಭೇಟಿ ಮಾಡಿ ಬ್ಯಾಂಕ್ಗಳು ರೈತರಿಗೆ ನೋಟಿಸ್ ನೀಡಿ ತೊಂದರೆ ನೀಡುತ್ತಿರುವ ಬಗ್ಗೆ ಮಾತುಕತೆ ನಡೆಸಿ ರೈತರ ವಾಸ್ತವ ಪರಿಸ್ಥಿತಿಯನ್ನು ಬ್ಯಾಂಕ್ನ ಮುಖ್ಯಸ್ಥರಿಗೆ ಮನದಟ್ಟು ಮಾಡಿದರು.
ಆದಷ್ಟು ಬೇಗನೆ ಲೀಡ್ ಬ್ಯಾಂಕ್ ಮುಂದಾಳತ್ವದಲ್ಲಿ ಅದಾಲತ್ ನಡೆಸುವ ಮೂಲಕ ರೈತರ ಸಾಲ ಮರುಪಾವತಿಗೆ ಅವಕಾಶ ಕಲ್ಪಿಸಿಕೊಡಬೇಕು. ರೈತರಿಗೆ ನೋಟಿಸ್ ನೀಡುವುದನ್ನು ನಿಲ್ಲಿಸಬೇಕು. ಸಾಲ ಪಡೆದ ರೈತರನ್ನು ವಿಶ್ವಾಸಕ್ಕೆ ಪಡೆಯುವ ಮೂಲಕ ಪಡೆದ ಸಾಲದ ಮರು ಪಾವತಿಗೆ ಪೂರಕವಾದ ವಾತಾವರಣ ನಿರ್ಮಿಸುವಂತಾಗಬೇಕು. ಈ ಬಾರಿ ಸುರಿದ ಮಳೆಯಿಂದ ಕೊಡಗಿನ ರೈತರು ಸಂಕಷ್ಟಕ್ಕೆ ಒಳಗಾಗಿರುವುದು, ಕೊಳೆರೋಗದಿಂದ ಕಾಫಿ ಬೆಳೆಗೆ ಹಾನಿಯಾಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಅದಾಗ್ಯೂ ರೈತರಿಗೆ ಬ್ಯಾಂಕ್ಗಳು ನ್ಯಾಯಾಲಯದ ಮೂಲಕ ನೋಟಿಸ್ ಜಾರಿಗೊಳಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ರೈತ ಸಂಘದ ಮನವಿ ಮೇರೆಗೆ ಕೊಡಗಿನ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ್ ಮಾತನಾಡಿ ಆದಷ್ಟು ಬೇಗನೆ ಬ್ಯಾಂಕ್ ವತಿಯಿಂದ ಅದಾಲತ್ ಆರಂಭಿಸಿ ರೈತರನ್ನು ಬರಮಾಡಿಕೊಂಡು ಹಲವು ಪ್ರಕರಣಗಳನ್ನು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಕರ್ನಾಟಕ ರಾಜ್ಯರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ರೈತ ಸಂಘದ ಪದಾಧಿಕಾರಿಗಳಾದ ಪಿ.ಕೃಪನ್, ಉಳುವಂಗಡ ಜೀವನ್, ಅಜ್ಜಮಾಡ ಪೂಣಚ್ಚ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.