ಗೋಣಿಕೊಪ್ಪಲು, ಆ. ೨೧: ದಕ್ಷಿಣ ಕೊಡಗು ಭಾಗದಲ್ಲಿ ಪ್ರತ್ಯೇಕ ರಕ್ತನಿಧಿ ಘಟಕ ಸ್ಥಾಪನೆಯಾಗ ಬೇಕೆಂದು ಲೋಪಮುದ್ರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಮೃತ್ ನಾಣಯ್ಯ ಹೇಳಿದರು.

ಗೋಣಿಕೊಪ್ಪಲುವಿನ ಶಿವಾಜಿ ಯುವ ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಇವರು, ಸಂಘ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಯುವಕರಲ್ಲಿ ರಕ್ತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ. ಸಂಘ ಸಂಸ್ಥೆಗಳು ಸಮಾಜಮುಖಿಯಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತಿದೆ.

ಆರೋಗ್ಯದ ವಿಚಾರ ಬಂದಾಗ ಪ್ರತಿ ನಾಗರಿಕನು ತನ್ನ ಶಕ್ತಿ ಮೀರಿ ತನ್ನ ಕುಟುಂಬಸ್ಥರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ವಿಶೇಷವಾಗಿ ಕೊಡಗಿನಲ್ಲಿ ರಕ್ತದಾನ ಕಾರ್ಯಕ್ರಮ ಗಳು ಹೆಚ್ಚಾಗಿ ನಡೆಯುತ್ತಿವೆ. ದಕ್ಷಿಣ ಕೊಡಗಿನಲ್ಲಿ ರಕ್ತನಿಧಿ ಇದ್ದಿದ್ದರೆ ಸ್ಥಳೀಯವಾಗಿ ಜನತೆಗೆ ಅಗತ್ಯಬಿದ್ದಾಗ ರಕ್ತವು ದೊರೆಯಲಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಯಲಿ, ಸರ್ಕಾರವು ಕೂಡ ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಲಿ ಎಂದರು.

ಶಿವಾಜಿ ಯುವ ಸೇನೆಯ ಅಧ್ಯಕ್ಷ ಎಲ್.ಎನ್. ಅಣ್ಣಪ್ಪ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ, ಕಳೆದ ಮೂರು ವರ್ಷದ ಹಿಂದೆ ಹಲವು ಯುವಕರು ಒಗ್ಗೂಡಿ ಶಿವಾಜಿ ಸೇನೆಯನ್ನು ಅಸ್ತಿತ್ವಕ್ಕೆ ತರುವ ಮೂಲಕ ಸಮಾಜದಲ್ಲಿ ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದೇವೆ. ಮೊದಲ ಬಾರಿಗೆ ರಕ್ತದಾನ ಶಿಬಿರ ಆಯೋಜಿಸಿ ಯಶಸ್ವಿ ಕಾರ್ಯಕ್ರಮವನ್ನು ನಡೆಸಿದ್ದೇವೆ. ಮುಂದೆಯೂ ಸಮಾಜಮುಖಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು. ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಗೋಣಿಕೊಪ್ಪಲುವಿನ ಉದ್ಯಮಿ ಎಂ.ಜಿ. ಮೋಹನ್ ರಕ್ತದಾನ ಶಿಬಿರದಿಂದ ಜನತೆಗೆ ಅನುಕೂಲವಾಗಿದೆ. ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ಪ್ರತಿ ನಾಗರಿಕನಿಗೆ ಆರೋಗ್ಯ ಸಮಸ್ಯೆ ಎದುರಾದಾಗ ರಕ್ತ ಪಡೆಯಲು ಅನುಕೂಲವಾಗಲಿದೆ ಎಂದರು.

ಕೊಡಗು ಜಿಲ್ಲಾ ರಕ್ತನಿಧಿ ಮುಖ್ಯಸ್ಥ ಕೆ.ಪಿ. ಕರುಂಬಯ್ಯ ಮಾತನಾಡಿ, ಜಿಲ್ಲೆಯಲ್ಲಿ ಹಲವು ಸಂಘ-ಸAಸ್ಥೆಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿ ಯಾಗುತ್ತಿವೆ. ಪ್ರತಿ ನಾಗರಿಕನೂ ರಕ್ತದಾನ ಮಾಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳು ವಂತಾಗಬೇಕು. ಇದರಿಂದ ಕಷ್ಟದಲ್ಲಿರುವ ರೋಗಿಗಳಿಗೆ ಅಗತ್ಯ ಸಂದರ್ಭ ರಕ್ತ ನೀಡುವ ಮೂಲಕ ಅವರ ಅಮೂಲ್ಯ ಜೀವವನ್ನು ಉಳಿಸುವ ಕಾರ್ಯ ಯಶಸ್ವಿ ಮಾಡಿದಂತಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಕಂದಾ ದೇವಯ್ಯ, ಅರುವತೊಕ್ಕಲು ಗ್ರಾ.ಪಂ. ಸದಸ್ಯರಾದ ಅಜ್ಜಿಕುಟ್ಟಿರ ಸಜನ್ ಚಂಗಪ್ಪ, ಜನಪದ ಪರಿಷತ್‌ನ ಪೊನ್ನಂಪೇಟೆ ಘಟಕದ ಅಧ್ಯಕ್ಷ ದಿಲನ್ ಚಂಗಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶಿವಾಜಿ ಸೇನೆಯ ಗೌರವ ಅಧ್ಯಕ್ಷ ಕೊಲ್ಲಿರ ಕಾವೇರಿಯಪ್ಪ (ಗಯ), ಉಮಾ ಮಹೇಶ್ವರಿ ದೇವಾಲಯ ಸಮಿತಿಯ ಖಜಾಂಚಿ ಜೆ.ಎ. ಉತ್ತಪ್ಪ ಸೇರಿದಂತೆ ಇನ್ನಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವಾಜಿ ಸೇನೆಯ ಗೌರವ ಕಾರ್ಯದರ್ಶಿ ಎನ್.ಜಿ. ಸುರೇಶ್ ಸ್ವಾಗತಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಶಿವಾಜಿ ಸೇನೆಯ ಖಜಾಂಜಿ ಜಿ.ಪಿ. ಸ್ವಾಮಿ, ಸಂಘಟನಾ ಕಾರ್ಯದರ್ಶಿ ಡಿ.ಎ. ವಿನೋದ್, ಸದಸ್ಯರುಗಳಾದ ರಾಜೇಶ್, ಅಕ್ಷಯ್, ವಿನೋದ್, ಸತೀಶ್, ಶಿವಮಣಿ, ಯೋಗೇಶ್, ನಾಗೇಶ್, ಸಿಜು ಹಾಗೂ ಕಾನೂನು ಸಲಹೆಗಾರರಾದ ಪ್ರದೀಪ್ ಉಪಸ್ಥಿತರಿದ್ದರು.

ಮುಂಜಾನೆಯಿAದ ಮಧ್ಯಾಹ್ನದವರೆಗೂ ರಕ್ತದಾನ ಶಿಬಿರ ನಡೆಯಿತು. ರಕ್ತದಾನ ಮಾಡಿದವರಿಗೆ ಸಂಸ್ಥೆ ವತಿಯಿಂದ ಪ್ರಶಂಸನಾ ಪತ್ರ ವಿತರಿಸಲಾಯಿತು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ನೀಡಿದರು. ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ವಹಿಸಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.