ಮಡಿಕೇರಿ, ಆ. ೨೦: ತಾ. ೨೨ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಹಾಗೂ ರಾಜ್ಯಪಾಲರ ವಿರುದ್ಧ ನಡೆದ ಪ್ರತಿಭಟನೆ ವಿರೋಧಿಸಿ ಬಿಜೆಪಿಯಿಂದ ರಾಜ್ಯವ್ಯಾಪಿ ಪ್ರತಿಭಟನೆ ನಡೆಯಲಿದೆ. ಅದೇ ರೀತಿ ಮಡಿಕೇರಿ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಡಳಿತ ಭವನ ತನಕ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಪ್ರಕಟಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮುಡಾ ಹಗರಣ, ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರದ ಬಗ್ಗೆ ತನಿಖೆ ನಡೆಯುತ್ತಿದೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಮಾತ್ರಕ್ಕೆ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಿರುವುದು ಸರಿಯಲ್ಲ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ವಿರುದ್ಧವೂ ಆರೋಪ ಬಂದಾಗ ಅವರು ರಾಜೀನಾಮೆ ನಡೆಸಿ ತನಿಖೆ ಎದುರಿಸಿದ್ದರು. ಸಿದ್ದರಾಮಯ್ಯ ಕೂಡ ಇದೇ ರೀತಿ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದರು. ಕಾಂಗ್ರೆಸ್ ಎಂ.ಎಲ್.ಸಿ. ಐವನ್ ಡಿಸೋಜಾ ಬಾಂಗ್ಲಾದಲ್ಲಿ ಸೃಷ್ಟಿಯಾದ ರಾಜಕೀಯ ಅರಾಜಕತೆ ಭಾರತದಲ್ಲೂ ಆಗುತ್ತದೆ. ರಾಜ್ಯಪಾಲರನ್ನು ಕೆಳಗಿಳಿಸಲಾಗುತ್ತದೆ ಎಂಬ ದೇಶದ್ರೋಹಿ ಹೇಳಿಕೆ ನೀಡಿರುವುದು ಖಂಡನೀಯ. ಇದು ಒಂದು ವರ್ಗವನ್ನು ಪ್ರಚೋದಿಸುವ ಹೇಳಿಕೆಯಾಗಿದ್ದು, ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಪ್ರತಿಕೃತಿ ದಹನ ವಿಚಾರವಾಗಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಮೊಕದ್ದಮೆ ದಾಖಲಿಸುವ ಕೆಲಸವಾಗಿತ್ತು. ಇದೀಗ ರಾಜ್ಯವ್ಯಾಪಿ ಪ್ರತಿಭಟನೆಯಲ್ಲಿ ನಡೆದ ಘಟನೆಗಳಿಗೆ ಕಾಂಗ್ರೆಸ್ ನಾಯಕರ ಉತ್ತರ ಏನು? ಎಂದು ಪ್ರಶ್ನಿಸಿದರು.

ಜಿಲ್ಲಾ ವಕ್ತಾರ ತಳೂರು ಕಿಶೋರ್ ಕುಮಾರ್ ಮಾತನಾಡಿ, ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿರುವುದು ಖಂಡನೀಯ. ಆಡಳಿತ ಹದಗೆಟ್ಟರೆ ರಾಜ್ಯಪಾಲರು ಮಧ್ಯಪ್ರವೇಶಿಸುವುದು ಸಾಮಾನ್ಯ. ತನಿಖೆಗೆ ಅನುಮತಿ ನೀಡಿದ ಮಾತ್ರಕ್ಕೆ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ. ರಾಜ್ಯದಲ್ಲಿ ಆಡಳಿತ ಸರಿಯಾಗಿ ನಡೆಯುತ್ತಿಲ್ಲ. ನ್ಯಾಯಬೆಲೆ ಅಂಗಡಿಗಳಿಗೆ ಕಮೀಷನ್ ಹಣ ಬಂದಿಲ್ಲ. ಮಳೆಹಾನಿ ಪರಿಸ್ಥಿತಿ ನಿರ್ವಹಣೆಯಲ್ಲಿಯೂ ವಿಫಲತೆ ಸಾಧಿಸಿದೆ ಎಂದು ಆರೋಪಿಸಿದರು.

ವಕ್ತಾರ ಬಿ.ಕೆ. ಅರುಣ್ ಕುಮಾರ್ ಮಾತನಾಡಿ, ಇದು ಸಿದ್ದರಾಮಯ್ಯ ಅವರ ರಾಜಕೀಯ ಕೊನೆ ಅಧ್ಯಾಯವಾಗಿದೆ. ಈ ಹಿಂದೆ ಬಿ.ಎಸ್., ಯಡಿಯೂರಪ್ಪ ವಿರುದ್ಧ ತನಿಖೆಗೆ ಅನುಮತಿ ನೀಡಿದ ಸಂದರ್ಭ ಸ್ವಾಗತಿಸಿದ್ದ ಸಿದ್ದರಾಮಯ್ಯ ಇಂದು ತಿರಸ್ಕಾರ ಮಾಡುವುದು ಅಸಮಂಜಸ ಎಂದರು.

ಗೋಷ್ಠಿಯಲ್ಲಿ ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ ಹಾಜರಿದ್ದರು.