ಸಿದ್ದಾಪುರ, ಆ. ೧೯: ಮನೆಯಿಂದ ನಾಪತ್ತೆಯಾಗಿದ್ದ ಯುವಕನ ಶವ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದ ಫೇರ್ ಲ್ಯಾಂಡ್ ಕಾಫಿ ತೋಟದಲ್ಲಿ ನಡೆದಿದೆ. ಫೇರ್ ಲ್ಯಾಂಡ್ ಕಾಫಿ ತೋಟದಲ್ಲಿ ಕಾರ್ಮಿಕರಾಗಿರುವ ರಮೇಶ - ಪೂವಮ್ಮ ದಂಪತಿಯ ಪುತ್ರ ಶಿವಕುಮಾರ್ (೨೭) ಎಂಬಾತನು ಭಾನುವಾರದಂದು ಮನೆಯಿಂದ ನಾಪತ್ತೆೆಯಾಗಿದ್ದನು. ಇದೀಗ ಆತನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.

ಶಿವಕುಮಾರ ಮದ್ಯ ಸೇವಿಸುತ್ತಿದ್ದ ಹಿನ್ನೆಲೆ ತಾಯಿ ಆತನಿಗೆ ಬುದ್ಧಿವಾದ ಹೇಳಿದ ಕಾರಣದಿಂದ ಮನೆಬಿಟ್ಟು ತೆರಳಿದ್ದ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇಂದು ಕೆರೆಯ ಬಳಿ ಈತನ ಚಪ್ಪಲಿ ಕಂಡು ಬಂದ ಹಿನ್ನೆಲೆಯಲ್ಲಿ ದುಬಾರೆಯ ರ‍್ಯಾಫ್ಟಿಂಗ್ ಬೋಟ್‌ಗಳನ್ನು ಕರೆಸಿ ಪೊಲೀಸರ ಸಮ್ಮುಖದಲ್ಲಿ ಹುಡುಕಾಡಿದಾಗ ಮೃತದೇಹವು ಪತ್ತೆಯಾಗಿದೆ. ಬಳಿಕ ಸಿದ್ಧಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.