ಕೇಂದ್ರದ ‘ಲ್ಯಾಟರಲ್ ಎಂಟ್ರಿ' ಕ್ರಮಕ್ಕೆ ಖರ್ಗೆ, ರಾಹುಲ್ ಕಿಡಿ
ನವದೆಹಲಿ, ಆ. ೧೯: ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರು ಹಾಗೂ ತಜ್ಞರನ್ನು ‘ಲ್ಯಾಟರಲ್ ಎಂಟ್ರಿ' ಮೂಲಕ ನೇಮಕ ಮಾಡಿಕೊಳ್ಳುವ ಕೇಂದ್ರದ ನಿರ್ಧಾರವನ್ನು ಖಂಡಿಸಿರುವ ಕಾಂಗ್ರೆಸ್, ಈ ಮೂಲಕ ಬಿಜೆಪಿ ಮೀಸಲಾತಿಯನ್ನು ಕಸಿಯುತ್ತಿದೆ ಎಂದು ಆರೋಪಿಸಿದೆ. ಎಸ್ಸಿ, ಎಸ್ಟಿ, ಒಬಿಸಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗಾಗಿ ಇರುವ ಹುದ್ದೆಗಳನ್ನು ಆರ್ಎಸ್ಎಸ್ ಮಂದಿಗೆ ನೀಡಲಾಗುತ್ತಿದೆ ಎಂದು ದೂರಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವು ವಲಯಗಳಲ್ಲಿ ನಿರ್ದಿಷ್ಟ ಹುದ್ದೆಗಳಿಗೆ ಪರಿಣತರು ಮತ್ತು ತಜ್ಞರನ್ನು ನೇಮಕ ಮಾಡಿಕೊಳ್ಳಲು ನಮ್ಮ ಪಕ್ಷವು ಆಡಳಿತದಲ್ಲಿದ್ದಾಗ ‘ಲ್ಯಾಟರಲ್ ಎಂಟ್ರಿ'ಯನ್ನು ಜಾರಿಗೆ ತಂದಿತ್ತು. ಆದರೆ, ಮೋದಿ ಸರ್ಕಾರ ಇದರ ಮೂಲಕ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಸಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಎಂದು ‘ಎಕ್ಸ್’ ಪೋಸ್ಟ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ೩ ಕೇಂದ್ರದ ಧೋರಣೆ ವಿರುದ್ಧ ಕಿಡಿಕಾರಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಲ್ಯಾಟರಲ್ ಎಂಟ್ರಿ ಮೂಲಕ ನಾಗರಿಕ ಸೇವಾ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿರುವುದು ದಲಿತರು, ಒಬಿಸಿ ಮತ್ತು ಆದಿವಾಸಿಗಳ ಮೇಲೆ ದಾಳಿ ಎಂದು ಗುಡುಗಿದ್ದಾರೆ. ಬಹು ಸಂಖ್ಯಾತರಿAದ ಬಿಜೆಪಿ ಮೀಸಲಾತಿಯನ್ನು ಕಸಿಯುತ್ತಿದೆ ಎಂದು ದೂರಿದ್ದಾರೆ. ‘ಲ್ಯಾಟರಲ್ ಎಂಟ್ರಿ' ಮೂಲಕ ನಾಗರಿಕ ಸೇವೆಗಳ ಹುದ್ದೆಗಳಿಗೆ ನೇಮಕಾತಿ ದಲಿತರು, ಒಬಿಸಿ ಮತ್ತು ಆದಿವಾಸಿಗಳ ಮೇಲಿನ ದಾಳಿ ಎಂದು ‘ಎಕ್ಸ್’ ಪೋಸ್ಟ್ನಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ರಾಜ್ಯಪಾಲರ ವಿರುದ್ಧ ಪ್ರತಿಭಟನೆ ವೇಳೆ ಬಸ್ಗೆ ಕಲ್ಲು
ಮಂಗಳೂರು, ಆ. ೧೯: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲವು ಕಿಡಿಗೇಡಿಗಳು ನಗರದ ಸ್ಟೇಟ್ ಬ್ಯಾಂಕ್ನಿAದ ಜೋಕಟ್ಟೆಗೆ ಹೋಗುವ ಖಾಸಗಿ ಸಿಟಿ ಬಸ್ಗೆ ಲಾಲ್ಬಾಗ್ನಲ್ಲಿ ಸೋಮವಾರ ಕಲ್ಲು ತೂರಿದರು. ಇದರಿಂದ ಪ್ರಯಾಣಿಕ ಮಹಿಳೆಯೊಬ್ಬರಿಗೆ ಗಾಯವಾಗಿದೆ. ಬಸ್ನಲ್ಲಿ ಹತ್ತು ಮಂದಿ ಪ್ರಯಾಣಿಕರಿದ್ದರು. ಚಾಲಕ ಸೀಟಿನ ಹಿಂದೆ ಕುಳಿತ್ತಿದ್ದ ಮಹಿಳೆಗೆ ಗಾಯವಾಗಿದೆ. ನಾಲ್ವರು ಸೇರಿ ಕಲ್ಲು ತೂರಿದ್ದಾರೆ. ಈ ಬಸ್ ನೌಫಾಲ್ ಎಂಬ ಬಿಜೆಪಿ ನಾಯಕರಿಗೆ ಸೇರಿದ್ದು. ಉದ್ದೇಶಪೂರ್ವಕವಾಗಿ ಕಲ್ಲು ತೂರಾಟ ನಡೆಸಲಾಗಿದೆ ಎಂದು ಬಸ್ ಸಿಬ್ಬಂದಿ ತಿಳಿಸಿದರು.
ನೈಋತ್ಯ ರೈಲ್ವೆ ವಲಯಕ್ಕೆ ರೂ. ೯೬೧.೨೨ ಕೋಟಿ ಬಜೆಟ್ ಹಂಚಿಕೆ
ಬೆAಗಳೂರು, ಆ. ೧೯: ಪ್ರಯಾಣಿಕರ ಸೌಕರ್ಯಗಳಿಗಾಗಿ ಒತ್ತು ನೀಡುವುದನ್ನು ಮುಂದುವರಿಸಲಾಗಿದ್ದು, ನೈಋತ್ಯ ರೈಲ್ವೆ ವಲಯಕ್ಕೆ ೨೦೨೪-೨೫ ನೇ ಸಾಲಿನಲ್ಲಿ ೯೬೧.೨೨ ಕೋಟಿ ರೂಪಾಯಿಗಳ ಬಜೆಟ್ ಹಂಚಿಕೆ ಮಾಡಲಾಗಿದೆ. ಕಳೆದ ತಿಂಗಳು ಮಂಡಿಸಿದ ಬಜೆಟ್ನಲ್ಲಿ ವಲಯಕ್ಕೆ ಘೋಷಿಸಲಾದ ಒಟ್ಟು ೬,೪೯೩.೮೭ ಕೋಟಿ ರೂ.ಗಳಲ್ಲಿ ಹೊಸ ಮಾರ್ಗಗಳಿಗೆ ೧,೪೪೮.೯೧ ಕೋಟಿ ರೂ. ಮತ್ತು ಡಬಲಿಂಗ್ಗೆ ೧,೨೪೧ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಬೆಂಗಳೂರು ವಿಭಾಗದಲ್ಲಿ ನಾಲ್ಕು ಡಬಲಿಂಗ್ ಯೋಜನೆಗಳು ಮತ್ತು ಒಂದು ಕ್ವಾಡ್ರುಪ್ಲಿಂಗ್ ಯೋಜನೆಗಳು ಹಂಚಿಕೆಯನ್ನು ಪಡೆದವುಗಳಲ್ಲಿ ಸೇರಿವೆ. ಬಿಡುಗಡೆಯಾದ ಪಿಂಕ್ ಬುಕ್ (ವಿವಿಧ ವಲಯಗಳು ಮತ್ತು ಯೋಜನೆಗಳ ಹಂಚಿಕೆಗಳ ವಿವರವಾದ ದಾಖಲೆ) ವಿವಿಧ ಯೋಜನೆಗಳಿಗೆ ಪ್ರತ್ಯೇಕ ಹಂಚಿಕೆಗಳನ್ನು ಪ್ರಮುಖವಾಗಿ ವಿವರಿಸಲಾಗಿದೆ.
ನರ್ಸ್ ಮೇಲೆ ಅತ್ಯಾಚಾರ - ವೈದ್ಯ ಸೇರಿ ಮೂವರ ಬಂಧನ
ಲಖನೌ, ಆ. ೧೯: ನರ್ಸ್ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಸಂಬAಧ ಖಾಸಗಿ ಆಸ್ಪತ್ರೆಯ ವೈದ್ಯ ಸೇರಿದಂತೆ ಮೂವರನ್ನು ಮೊರದಾಬಾದ್ ಪೊಲೀಸರು ಬಂಧಿಸಿದ್ದಾರೆ. ತಮ್ಮ ಮಗಳ ಮೇಲೆ ಆಕೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವೈದ್ಯರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಠಾಕೂರ್ದ್ವಾರ ಪೊಲೀಸ್ ಠಾಣೆಗೆ ಆಗಸ್ಟ್ ೧೮ರಂದು ದೂರು ನೀಡಲಾಗಿತ್ತು ಎಂದು ಮೊರದಾಬಾದ್ ಗ್ರಾಮಾಂತರ ಎಸ್ಪಿ ಸಂದೀಪ್ ಕುಮಾರ್ ಮೀನಾ ತಿಳಿಸಿದ್ದಾರೆ. ದೂರಿನ ಆಧಾರದಲ್ಲಿ ಆಸ್ಪತ್ರೆಯ ವೈದ್ಯ ಶಹನವಾಜ್, ಜುನೈದ್ ಮತ್ತು ಮೆಹನವಾಜ್ (ಮಹಿಳೆ) ಎಂಬವರನ್ನು ಆರೋಪಿಗಳು ಎಂದು ಗುರುತಿಸಲಾಗಿತ್ತು. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸದ್ಯ ಮೂವರನ್ನೂ ಬಂಧಿಸಲಾಗಿದೆ.
ತನಿಖೆಗೆ ಅನುಮತಿ ಪ್ರಶ್ನಿಸಿದ ಸಿಎಂ- ಮತ್ತೊಂದು ರಿಟ್ ಅರ್ಜಿ ಸಲ್ಲಿಕೆ
ಬೆಂಗಳೂರು, ಆ. ೧೯: ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ಅಕ್ರಮವಾಗಿ ೧೪ ನಿವೇಶನ ಪಡೆದಿದ್ದಾರೆ ಎಂಬ ಪ್ರಕರಣಕ್ಕೆ ಸಂಬAಧಿಸಿದAತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಹೈಕೋರ್ಟ್ನಲ್ಲಿ ಮತ್ತೊಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಪರ ವಕಾಲತ್ತು ವಹಿಸಿರುವ ಶತಭಿಷ ಶಿವಣ್ಣ ಅವರು ಸೋಮವಾರ ಬೆಳಿಗ್ಗೆ, ಈ ಅರ್ಜಿಯನ್ನು, ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ವಿಶೇಷ ನ್ಯಾಯಪೀಠದ ಮುಂದೆ ಮೆಮೊ ಮೂಲಕ ಸಲ್ಲಿಸಿದರು. ಸಿದ್ದರಾಮಯ್ಯ ಪರ ಹಿರಿಯ ವಕೀಲ ರವಿವರ್ಮ ಕುಮಾರ್, ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದರೆ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು. ಅರ್ಜಿಯಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ಸಲ್ಲಿಸಿರುವ ಪಿರ್ಯಾದುದಾರರಾದ ಮೈಸೂರಿನ ಸ್ನೇಹಮಯಿ ಕೃಷ್ಣ, ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಮತ್ತು ಹೈಕೋರ್ಟ್ ವಕೀಲ ಎಸ್.ಪಿ.ಪ್ರದೀಪ್ ಕುಮಾರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಉಗ್ರರ ದಾಳಿಯಲ್ಲಿ ಸಿ.ಆರ್.ಪಿ.ಎಫ್. ಇನ್ಸ್ಪೆಕ್ಟರ್ ಹುತಾತ್ಮ
ಉದ್ದಂಪುರ, ಆ. ೧೯: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ಒಳನುಸುಳುವಿಕೆ ಪ್ರಕರಣ ಹೆಚ್ಚಾಗುತ್ತಿದ್ದು, ಸೋಮವಾರ ಉಗ್ರರ ದಾಳಿಯಲ್ಲಿ ಓರ್ವ ಸಿಆರ್ಪಿಎಫ್ ಇನ್ಸ್ಪೆಕ್ಟರ್ ಹುತಾತ್ಮರಾಗಿದ್ದಾರೆ. ಉದ್ದಂಪುರ ಜಿಲ್ಲೆಯಲ್ಲಿ ಗಸ್ತು ಪಡೆಯ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಇನ್ಸ್ಪೆಕ್ಟರ್ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸಂತ್ಗಢದ ದುಡು ಪ್ರದೇಶದಲ್ಲಿ ಮಧ್ಯಾಹ್ನ ೩:೩೦ ರ ಸುಮಾರಿನಲ್ಲಿ ಸಿಆರ್ಪಿಎಫ್ ಮತ್ತು ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿನ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ. ಇದರಿಂದ ೧೮೭ನೇ ಬೆಟಾಲಿಯನ್ಗೆ ಸೇರಿದ ಸಿಆರ್ಪಿಎಫ್ನ ಇನ್ಸ್ಪೆಕ್ಟರ್ಗೆ ಗುಂಡು ತಗುಲಿದೆ. ಗುಂಡೇಟಿನಿAದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಹುತಾತ್ಮರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಜಂಟಿ ಗಸ್ತು ತಂಡ ಬಲವಾದ ಪ್ರತೀಕಾರದ ಮೂಲಕ ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ. ಮತ್ತಷ್ಟು ಸೇನೆ ಸ್ಥಳಕ್ಕೆ ಧಾವಿಸಿದ್ದು, ಉಗ್ರರನ್ನು ಪತ್ತೆ ಹಚ್ಚಿ, ಹೊಡೆದುರುಳಿಸಲು ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.