ಸೋಮವಾರಪೇಟೆ, ಆ. ೧೯: ಕಳೆದ ಐದಾರು ದಶಕಗಳಿಂದ ಕೃಷಿ ಮಾಡಿಕೊಂಡಿರುವ ಜಾಗವನ್ನು ಸಿ ಮತ್ತು ಡಿ ಜಾಗವೆಂದು ಪರಿಗಣಿಸಿ, ಇದೀಗ ಅರಣ್ಯದ ವಶಕ್ಕೆ ಪಡೆಯಲು ಮುಂದಾಗಿರುವ ಕ್ರಮದ ವಿರುದ್ಧ ಸೋಮವಾರಪೇಟೆಯಲ್ಲಿ ರೈತರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು.
ಒಕ್ಕಲಿಗರ ಸಮುದಾಯ ಭವನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ವಿವೇಕಾನಂದ ಸರ್ಕಲ್ ಮೂಲಕ ಸಿ.ಕೆ. ಸುಬ್ಬಯ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣ, ತ್ಯಾಗರಾಜ ರಸ್ತೆ, ಮುಖ್ಯ ರಸ್ತೆಯ ಮೂಲಕ ಸಾಗಿ ಜೇಸೀ ವೇದಿಕೆಯಲ್ಲಿ ಸಮಾಪನಗೊಂಡಿತು.
ಸೋಮವಾರಪೇಟೆ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಪ್ರತಿಭಟನೆಯಲ್ಲಿ ವಿವಿಧ ಘೋಷ ವಾಕ್ಯಗಳನ್ನು ಒಳಗೊಂಡ ಫಲಕಗಳನ್ನು ಹಿಡಿದ ರೈತರು, ರೈತ ಮಹಿಳೆಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ರೈತರ ಪ್ರತಿಭಟನಾ ಮೆರವಣಿಗೆ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ, ಸಂತೆ ದಿನವಾದರೂ ಸಹ ಒಂದು ಗಂಟೆಗಳ ಕಾಲ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಇಲ್ಲಿನ ಜೇಸೀ ವೇದಿಕೆಯಲ್ಲಿ ಪ್ರತಿಭಟನೆ ಸಮಾಪನಗೊಂಡು, ಸಭೆ ನಡೆಯಿತು. ಈಗಾಗಲೇ ಸುಪ್ರೀಂಕೋರ್ಟ್ನ ಸೂಚನೆಯಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಆದೇಶಗಳನ್ನು ಹೊರಡಿಸುತ್ತಿದ್ದು, ಕೃಷಿಯೋಗ್ಯ ಭೂಮಿಯನ್ನು ಮತ್ತೆ ಅರಣ್ಯದ ವಶಕ್ಕೆ ಪಡೆದುಕೊಳ್ಳಲು ಹುನ್ನಾರ ಮಾಡಲಾಗಿದೆ. ತಕ್ಷಣ ಸ್ಥಳೀಯ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು, ಹೋರಾಟ ಸಮಿತಿಯ ಪ್ರಮುಖರನ್ನು ಒಳಗೊಂಡ ನಿಯೋಗ ಮುಖ್ಯ ಮಂತ್ರಿಗಳು, ಅರಣ್ಯ ಸಚಿವರನ್ನು ಭೇಟಿ ಮಾಡಿ
(ಮೊದಲ ಪುಟದಿಂದ) ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲು ತೀರ್ಮಾನ ಕೈಗೊಳ್ಳಲಾಯಿತು. ಒಂದು ವೇಳೆ ನಮ್ಮ ಜಾಗವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದರೆ ನಾವುಗಳು ಅಕ್ಷರಶಃ ಬೀದಿಪಾಲಾಗುತ್ತೇವೆ. ಅನೇಕ ದಶಕಗಳಿಂದ ನೆಲೆಸಿರುವ ನಮಗೆ ಅಸ್ತಿತ್ವವೇ ಇಲ್ಲವಾಗುತ್ತದೆ. ಇದು ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಎಲ್ಲರೂ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧರಾಗಬೇಕಿದೆ. ಕಾನೂನು ಭಾಗದಲ್ಲಿಯೂ ಹೋರಾಟ ನಡೆಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಕಳೆದ ೨೨ ವರ್ಷಗಳ ಹಿಂದೆಯೇ ಈ ಬಗ್ಗೆ ಹೋರಾಟ ಮಾಡಲಾಗಿತ್ತು. ಈವರೆಗೆ ಆಡಳಿತ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳು ಈ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಇದೀಗ ಅಂತಿಮ ಹಂತಕ್ಕೆ ಬಂದಿದ್ದೇವೆ. ತಾತ, ಮುತ್ತಾತಂದಿರ ಕಾಲದಿಂದಲೂ ತೋಟಗಳನ್ನಾಗಿ ಮಾಡಿಕೊಂಡು ಬಂದಿರುವ ಜಾಗವನ್ನು ಇದೀಗ ಸಿ ಮತ್ತು ಡಿ ನೆಪವೊಡ್ಡಿ ಏಕಾಏಕಿ ತೆರವು ಮಾಡಿದರೆ ರೈತರ ಬದುಕು ಬೀದಿ ಪಾಲಾಗುತ್ತದೆ. ಈಗಾಗಲೇ ಜಾಗದ ಸಕ್ರಮೀಕರಣಕ್ಕೆ ತಾಲೂಕು ಕಚೇರಿಗೂ ಅರ್ಜಿ ಸಲ್ಲಿಸಿದ್ದೇವೆ. ಆದರೂ ವಿಲೇವಾರಿ ಆಗಿಲ್ಲ. ಈ ಹೋರಾಟ ಅಂತಿಮ ಘಟ್ಟ ತಲುಪಿದೆ. ಶಾಸಕ ಮಂತರ್ ಹಾಗೂ ಪೊನ್ನಣ್ಣ ಅವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸಭೆಗೆ ಆಗಮಿಸಿದ ಶಾಸಕ ಡಾ. ಮಂತರ್ ಗೌಡ ಅವರಿಗೆ ಹೋರಾಟ ಸಮಿತಿ ಮೂಲಕ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ತಾನೂ ಸಹ ನಿಮ್ಮೊಂದಿಗೆ ಈ ಹೋರಾಟಕ್ಕೆ ಕೈ ಜೋಡಿಸುತ್ತೇನೆ. ೨೬ ಗ್ರಾಮಗಳ ಪ್ರಮುಖರೊಂದಿಗೆ ಜನಪ್ರತಿನಿಧಿಗಳ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ಯಲಾಗುವುದು. ಕಾನೂನು ರೀತಿಯಲ್ಲಿ ಹೋರಾಟ ನಡೆಸಿ, ಜಾಗವನ್ನು ಉಳಿಸಿಕೊಳ್ಳಲಾಗುವುದು. ಇರುವ ಅವಧಿಯಲ್ಲಿ ರೈತರ ಪರ ನಿಲ್ಲುತ್ತೇವೆ. ಮಲೆನಾಡು ಜಿಲ್ಲೆಗಳಲ್ಲೂ ಈ ಸಮಸ್ಯೆಯಿದೆ. ರಾಜಕೀಯ ರಹಿತ ಹೋರಾಟ ಮಾಡಬೇಕು. ಸಂಸದರೊAದಿಗೆ ಕೇಂದ್ರ ಅರಣ್ಯ ಸಚಿವರನ್ನೂ ಭೇಟಿ ಮಾಡಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗುವುದು. ಕಾನೂನು ತಜ್ಞರೊಂದಿಗೂ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಪರಿಸರವಾದಿಗಳ ಪರವಾಗಿರುವ ಜಂಟಿ ಕಾರ್ಯದರ್ಶಿಯ ಕಿತಾಪತಿಯಿಂದಾಗಿ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದೆ. ಸರ್ಕಾರದ ಅರಣ್ಯ ಇಲಾಖೆಯ ಮೂಲಕ ವನ್ಯ ಪ್ರಾಣಿಗಳ ಚರ್ಮ, ಕೊಂಬು ವಾಪಸ್ ಕೇಳಿರುವುದು. ತೋಟಗಳಲ್ಲಿ ರೈತರು ಬೆಳೆದಿರುವ ಮರಗಳಿಗೆ ನಂಬರ್ ಹಾಕಿ ಅರಣ್ಯದ ವಶಕ್ಕೆ ಪಡೆಯಲು ಹುನ್ನಾರ ನಡೆದಿರುವುದು, ಸಿ ಮತ್ತು ಡಿ ಜಾಗವನ್ನು ಮರಳಿ ಅರಣ್ಯಕ್ಕೆ ಪಡೆಯಲು ಇಲಾಖೆ ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
೧೯೯೧-೯೨ರಲ್ಲಿ ಲ್ಯಾಂಡ್ ಬ್ಯಾಂಕಿಗೆ ನೀಡಿದ್ದ ೨.೫೮ಲಕ್ಷ ಹೆಕ್ಟೇರ್ ಪ್ರದೇಶವನ್ನು ನಮ್ಮ ಸರ್ಕಾರವಿದ್ದ ಸಂದರ್ಭ ಲ್ಯಾಂಡ್ ಬ್ಯಾಂಕ್ನಿAದ ವಾಪಸ್ ಪಡೆದು, ಈ ಭೂಮಿಯಲ್ಲಿ ಯಾರೆಲ್ಲಾ ಸಾಗುವಳಿ ಮಾಡಿದ್ದಾರೋ ಅವರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿತ್ತು. ೫ ಎಕರೆ ಜಾಗವಿದ್ದು, ಹೆಚ್ಚುವರಿ ಒತ್ತುವರಿ ಮಾಡಿಕೊಂಡಿದ್ದರೂ ೩೦ ವರ್ಷಕ್ಕೆ ಭೋಗ್ಯಕ್ಕೆ ನೀಡಲು ಆದೇಶ ಹೊರಡಿಸಲಾಗಿತ್ತು. ಫಾರೆಸ್ಟ್ ಇಲಾಖೆಯಿಂದ ನೋಟಿಸ್ ನೀಡಿದ್ದರೂ ರೈತರ ೧ ಇಂಚು ಜಾಗವನ್ನೂ ಖುಲ್ಲಾ ಪಡಿಸಲು ಬಿಟ್ಟಿರಲಿಲ್ಲ. ಇದರೊಂದಿಗೆ ಕಸ್ತೂರಿ ರಂಗನ್ ಮತ್ತು ಗಾಡ್ಗೀಳ್ ವರದಿಯನ್ನೂ ಅನುಷ್ಠಾನಕ್ಕೆ ಬಿಟ್ಟಿರಲಿಲ್ಲ ಎಂದರು.
ಇದೀಗ ಅರಣ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ನೀಡಿರುವ ಸಿ ಮತ್ತು ಡಿ ಜಾಗವನ್ನು ಅರಣ್ಯ ಎಂದು ಪರಿಗಣಿಸುವ ನೋಟಿಸನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ಅರಣ್ಯ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವ ಮೂಲಕ ರೈತರ ಜಾಗವನ್ನು ರೈತರಿಗೆ ಬಿಟ್ಟುಕೊಡಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಿರಂತರ ಹೋರಾಟಕ್ಕೆ ನಾವುಗಳು ಸಿದ್ದರಿದ್ದೇವೆ ಎಂದು ಭರವಸೆ ನೀಡಿದರು.
ರೈತ ಸಂಘದ ಮನು ಸೋಮಯ್ಯ ಮಾತನಾಡಿ, ಸಿ ಮತ್ತು ಡಿ ಭೂಮಿ ಉಳಿಸಿಕೊಳ್ಳಲು ಕಾನೂನು ಭಾಗದಲ್ಲಿ ಹೋರಾಟ ಅನಿವಾರ್ಯವಾಗಿದೆ. ಸ್ಥಳೀಯ ನಿಯೋಗ ರಾಜ್ಯಕ್ಕೆ ತೆರಳಿ, ರಾಜ್ಯದ ಮುಖಂಡರನ್ನು ಒಳಗೊಂಡAತೆ ನಿಯೋಗ ಕೇಂದ್ರದೊAದಿಗೆ ವ್ಯವಹರಿಸಬೇಕು. ಇದೀಗ ಅರಣ್ಯ ಇಲಾಖೆಯಿಂದ ಬಂದಿರುವ ನೋಟಿಸ್ ಮತ್ತು ಪ್ರಕಟಣೆಗಳಿಗೆ ತಕ್ಷಣ ರೈತರು ತಕರಾರು ಸಲ್ಲಿಸಬೇಕು. ತಮ್ಮ ಬಳಿಯಿರುವ ದಾಖಲೆಗಳೊಂದಿಗೆ ಅಧಿಕಾರಿಗಳಿಗೆ ಜವಾಬು ನೀಡಬೇಕು ಎಂದರು.
ಶಾAತಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಗ್ಗನ ಅನಿಲ್ ಮಾತನಾಡಿ, ಈ ಸಮಸ್ಯೆ ಕೇವಲ ಶಾಂತಳ್ಳಿ ಹೋಬಳಿ, ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಮಲೆನಾಡು ಭಾಗದ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗುತ್ತದೆ. ಅರಣ್ಯ ಇಲಾಖೆಯಿಂದ ಬಂದ ನೋಟಿಸ್ಗಳಿಗೆ ಅಕ್ಟೋಬರ್ ಒಳಗೆ ನಮ್ಮಲ್ಲಿರುವ ದಾಖಲೆ ಸಲ್ಲಿಸಬೇಕು. ಒಂದು ವೇಳೆ ಅರಣ್ಯಾಧಿಕಾರಿಗಳು ತೆರವಿಗೆ ಬಂದರೆ ಮೊದಲು ಸಿ ಮತ್ತು ಡಿ ಜಾಗ ಎಲ್ಲಿದೆ. ಯಾವ ಸರ್ವೆನಂಬರ್ಗಳನ್ನು ಒಳಗೊಂಡಿದೆ. ನಿಮ್ಮಲ್ಲಿ ಏನು ದಾಖಲೆಗಳಿವೆ ಎಂದು ಪ್ರಶ್ನೆ ಮಾಡಬೇಕು ಎಂದರಲ್ಲದೆ, ಮೊದಲು ಸಿ ಮತ್ತು ಡಿ ಜಾಗದ ಜಂಟಿ ಸರ್ವೆ ನಡೆಸಬೇಕು ಎಂದು ಆಗ್ರಹಿಸಿದರು.
ರೈತರು ಒಗ್ಗಟ್ಟಾದರೆ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ. ಈ ನಿಟ್ಟಿನಲ್ಲಿ ಮುಂದಿನ ಎಲ್ಲಾ ಹೋರಾಟಗಳಿಗೂ ರೈತರು ಭಾಗಿಯಾಗಬೇಕು. ಕಾನೂನು ಭಾಗದ ಹೋರಾಟಕ್ಕೂ ಸಮಿತಿಯಿಂದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ರೈತ ಹೋರಾಟ ಸಮಿತಿ ಸಂಚಾಲಕ ಚಕ್ರವರ್ತಿ ಸುರೇಶ್ ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್ ಮಾತನಾಡಿ, ಈಗಾಗಲೇ ಅರಣ್ಯ ಇಲಾಖೆಯ ಹೆಸರಿಗೆ ದಾಖಲಾಗಿರುವ ಸಿ ಮತ್ತು ಡಿ ಜಾಗವನ್ನು ರದ್ದು ಮಾಡಿ, ಕಂದಾಯ ಇಲಾಖೆಯ ಹೆಸರಿಗೆ ದಾಖಲಿಸಬೇಕು. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಬೇಕು. ಕೃಷಿ ಪ್ರದೇಶ ಹೊರತುಪಡಿಸಿ ದಟ್ಟ ಕಾಡು, ನೆಡುತೋಪು, ಅರಣ್ಯ ಪ್ರದೇಶ, ಕಲ್ಲು ಮಂಟಿ, ಗುಡ್ಡ ಪ್ರದೇಶಗಳನ್ನು ಗುರುತಿಸಿ, ಅರಣ್ಯ ಜಮೀನೆಂದು ಘೋಷಣೆ ಮಾಡಬೇಕು. ಸಾಗುವಳಿಗೆ ಯೋಗ್ಯವಾದ ಎಲ್ಲಾ ಜಮೀನುಗಳಿಗೆ ನಮೂನೆ ೫೦-೫೩-೫೭ರ ಅರ್ಜಿಗಳನ್ನು ಪರಿಗಣಿಸಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದರು.
ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಅವರು ಸಿ ಮತ್ತು ಡಿ ಜಾಗ ಸಮಸ್ಯೆಗಳ ಬಗ್ಗೆ ರೈತರಿಗೆ ವಿಸ್ತೃತ ಮಾಹಿತಿ ನೀಡಿ, ಮುಂದಿನ ಎಲ್ಲಾ ಹೋರಾಟಗಳಿಗೂ ಬೆಂಬಲ ನೀಡುವುದಾಗಿ ಘೋಷಿಸಿದರು.
ಪ್ರತಿಭಟನೆ ಹಾಗೂ ಪ್ರತಿಭಟನಾ ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ರೈತ ಸಂಘದ ತಾಲೂಕು ಅಧ್ಯಕ್ಷ ದಿನೇಶ್, ಹೋರಾಟ ಸಮಿತಿಯ ಎಸ್.ಬಿ. ಭರತ್ಕುಮಾರ್, ಕೆ.ಟಿ. ಪರಮೇಶ್, ಕೂತಿ ದಿವಾಕರ್, ಡಿ.ಎ. ಪರಮೇಶ್, ದೇವರಾಜ್, ಹರಗ ಮಿಥುನ್, ಕಲ್ಕಂದೂರು ಪ್ರಕಾಶ್, ಬಗ್ಗನ ಸುದೀಪ್, ಯೋಗೇಂದ್ರ, ತ್ರಿಶೂಲ್, ನತೀಶ್ ಮಂದಣ್ಣ, ಗರಗಂದೂರು ಲಕ್ಷö್ಮಣ್, ಬಿ.ಎ. ಧರ್ಮಪ್ಪ, ಕುಂದಳ್ಳಿ ದಿನೇಶ್, ಶರಣ್ ಗೌಡ ಸೇರಿದಂತೆ ಸಾವಿರಕ್ಕೂ ಅಧಿಕ ರೈತರು ಭಾಗಿಯಾಗಿದ್ದರು.