ಮಡಿಕೇರಿ, ಆ. ೨೦: ಮಡಿಕೇರಿ ನಗರದಲ್ಲಿ ದಿನದಿಂದ ದಿನಕ್ಕೆ ಸಮಸ್ಯೆಗಳು ಉಲ್ಭಣಿಸುತ್ತಿದ್ದು, ಪರಿಹಾರ ಮಾತ್ರ ಶೂನ್ಯವಾಗಿದೆ. ಜೊತೆಗೆ ಪೌರಾಯುಕ್ತರನ್ನು ವರ್ಗಾವಣೆಗೊಳಿಸುವಂತೆ ಸರ್ವ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡು ನಿರ್ಣಯಿಸಿದರೂ ಇದುವರೆಗೂ ವರ್ಗಾವಣೆಗೊಳಿಸಲು ಕ್ರಮಕೈಗೊಳ್ಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ನಗರಸಭೆಯ ಚುನಾಯಿತ ಎಸ್.ಡಿ.ಪಿ.ಐ. ಸದಸ್ಯರು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸದಸ್ಯ ಅಮೀನ್ ಮೊಹಿಸಿನ್, ನಗರದಲ್ಲಿ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ಪರಿಹಾರ ಸಾಧಿಸುವಲ್ಲಿ ಆಡಳಿತ ಸಂಪೂರ್ಣ ವಿಫಲತೆ ಸಾಧಿಸಿದೆ. ಮೊದಲನೇ ಅಧ್ಯಕ್ಷರ-ಉಪಾಧ್ಯಕ್ಷರ ಅವಧಿ ಮುಕ್ತಾಯವಾಗಿದ್ದು, ಆಡಳಿತ ಮಂಡಳಿ ಜನರ ಸಮಸ್ಯೆಗೆ ಸ್ಪಂದಿಸಿಲ್ಲ.
ಸಂಖ್ಯಾಬಲ ಹೊಂದಿ ಅಧಿಕಾರದಲ್ಲಿರುವ ಬಿಜೆಪಿ ಸದಸ್ಯರಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಜನರ ಕೆಲಸ ಮಾಡುವಲ್ಲಿ ಇವರು ಅಸಮರ್ಥರಾಗಿದ್ದಾರೆ ಎಂದರು. ಈ ಹಿಂದೆ ವಿಶೇಷ ಸಭೆ ನಡೆಸಿ ಪೌರಾಯುಕ್ತರನ್ನು ವರ್ಗಾವಣೆಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಇದಕ್ಕೆ ೨೩ ಸದಸ್ಯರು ಒಮ್ಮತದ ತೀರ್ಮಾನ ನೀಡಿದ್ದರು. ನಿರ್ಣಯ ಕೈಗೊಂಡು ೮ ತಿಂಗಳು ಕಳೆದರೂ ಯಾವುದೇ ಕ್ರಮವಾಗಿಲ್ಲ. ಈ ಹಿಂದೆ ನಗರಸಭೆಗೆ ಪೌರಾಡಳಿತ ಸಚಿವರು ಆಗಮಿಸಿದ್ದ ಸಂದರ್ಭ ಸ್ಥಳೀಯ ಶಾಸಕರು ಪತ್ರ ನೀಡಿದರೆ ವರ್ಗಾವಣೆಗೊಳಿಸುತ್ತೇವೆ ಎಂದಿದ್ದರು. ಆದರೆ, ಶಾಸಕರು ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಶಾಸಕರು ಪತ್ರ ನೀಡದಿರಲು ಕಾರಣವೇನು? ಎಂದು ಪ್ರಶ್ನಿಸಿದರು.
ಒಮ್ಮತದ ತೀರ್ಮಾನವಾಗಿ ವರ್ಗಾವಣೆಗೆ ನಿರ್ಣಯಿಸಿದರೂ ಅನಂತರ ಹಿಂದಿನ ಅಧ್ಯಕ್ಷರು ಪೌರಾಯುಕ್ತರೊಂದಿಗೆ ಮಾಜಿ ಜನಪ್ರತಿನಿಧಿ ಒಬ್ಬರೊಂದಿಗೆ ಖಾಸಗಿ ರೆಸಾರ್ಟ್ನಲ್ಲಿ ಸಭೆ ನಡೆಸಿದ್ದಾರೆ. ಆಯುಕ್ತರ ಜೊತೆ ಕೆಲವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸಮಸ್ಯೆ ಪರಿಹಾರದಲ್ಲಿ ವಿಫಲ
ಕಳೆದ ೨೦ ದಿನಗಳಿಂದ ಮಡಿಕೇರಿ ನಗರಸಭೆಯಲ್ಲಿ ಸರ್ವರ್ ಸಮಸ್ಯೆಯನ್ನು ಕೃತಕವಾಗಿ ಸೃಷ್ಟಿಸಲಾಗಿದೆ. ರಾಜ್ಯದ ಎಲ್ಲೂ ಇಲ್ಲದ ಸಮಸ್ಯೆ ಇಲ್ಲಿ ಮಾತ್ರ ಆಗಲು ಹೇಗೆ ಸಾಧ್ಯ ಎಂದು ಅಮೀನ್ ಮೊಹಿಸಿನ್ ಪ್ರಶ್ನಿಸಿದರು.
ಇದರಿಂದ ಖಾತೆ ವರ್ಗಾವಣೆ, ಕಡತಗಳ ವಿಲೇವಾರಿ ಆಗುತ್ತಿಲ್ಲ. ನಿರಪೇಕ್ಷಣಾ ಪತ್ರ ಲಭ್ಯವಾಗುತ್ತಿಲ್ಲ. ಮಡಿಕೇರಿ ಸಂಪೂರ್ಣ ಕತ್ತಲಮಯವಾಗಿದ್ದು, ಒಂದು ‘ಟ್ಯೂಬ್ಲೈಟ್’ ಬದಲಾವಣೆಗೊಳಿಸಲು ಸಾಧ್ಯವಾಗದ ಮಟ್ಟಿಗೆ ಆಡಳಿತ ತಲುಪಿದೆ. ಹಲವು ರಸ್ತೆಗಳು ಗುಂಡಿ ಬಿದ್ದಿದ್ದು, ದಸರಾ ಸಮಯದಲ್ಲಿ ನಾಮಕಾವಸ್ಥೆಗೆ ರಸ್ತೆ ಸರಿಪಡಿಸಿ ರೂ. ೭೫ ಲಕ್ಷದಿಂದ ರೂ. ೧ ಕೋಟಿ ದರೋಡೆ ನಡೆಯುತ್ತದೆ ಎಂದು ದೂರಿದರು.
ನಗರೋತ್ಥಾನ ಕಾಮಗಾರಿ ಶೇ ೩೦ ಪೂರ್ಣಗೊಂಡಿಲ್ಲ. ನಿವೇಶನ ರಹಿತರಿಗೆ ನಿವೇಶನ ನೀಡಲು ಇದುವರೆಗೂ ಕ್ರಮವಹಿಸಿಲ್ಲ. ದುಸ್ಥಿತಿಯಲ್ಲಿರುವ ಮಾರುಕಟ್ಟೆ ಮರುನಿರ್ಮಾಣಕ್ಕೆ ಪರ್ಯಾಯ ಜಾಗ ಗುರುತಿಸಿ ಹಣ ಮೀಸಲಿಟ್ಟರೂ ಇದುವರೆಗೂ ಯಾವುದೇ ಕೆಲಸ ಈ ಸಂಬAಧ ನಡೆದಿಲ್ಲ ಎಂದು ಅಮೀನ್ ಅತೃಪ್ತಿ ವ್ಯಕ್ತಪಡಿಸಿದರು.
ನಾಯಿಗಳ ಕಾಟವೂ ನಗರದಲ್ಲಿ ಹೆಚ್ಚಾಗಿದ್ದು, ಭಯದಲ್ಲಿ ಜನತೆ ಓಡಾಡುವ ಸ್ಥಿತಿ ಇದೆ. ಶೆಡ್ ನಿರ್ಮಿಸಿ ನಾಯಿಗಳನ್ನು ಒಂದೆಡೆ ಇರಿಸಿ ಸಾಕುವ ನಿರ್ಧಾರವನ್ನು ಕಾರ್ಯಗತಗೊಳಿಸಿಲ್ಲ. ಇವೆಲ್ಲ ಸಮಸ್ಯೆಗಳ ಪರಿಹಾರಕ್ಕೆ ಮಡಿಕೇರಿ ಶಾಸಕರು ಮಧ್ಯಪ್ರವೇಶಿಸಬೇಕು. ಒಂದು ವಾರದೊಳಗೆ ಸಮಸ್ಯೆಗಳು ಪರಿಹಾರ ಕಾಣದಿದ್ದಲ್ಲಿ ಜನರ ಸಹಕಾರದೊಂದಿಗೆ ನಗರಸಭೆ ಎದುರು ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಮತ್ತೋರ್ವ ಸದಸ್ಯ ಮನ್ಸೂರ್ ಅಲಿ ಮಾತನಾಡಿ, ಸರ್ವರ್ ಸಮಸ್ಯೆಯಿಂದ ಜನರಿಗೆ ತೊಂದರೆ ಆಗಿದೆ. ನಮೂನೆ-೩ ನವೀಕರಣಕ್ಕೆ ಒಂದು ತಿಂಗಳು ತೆಗೆದುಕೊಳ್ಳಲಾಗುತ್ತಿದೆ. ಟೆಂಡರ್ ಆದ ಕೆಲಸಗಳೂ ನಡೆಯುತ್ತಿಲ್ಲ. ನಗರಸಭೆಯಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಗೋಷ್ಠಿಯಲ್ಲಿ ನಗರಸಭಾ ಸದಸ್ಯರುಗಳಾದ ಬಷೀರ್ ಅಹಮ್ಮದ್, ನೀಮಾ ಹರ್ಷದ್, ಮೇರಿ ವೇಗಸ್ ಹಾಜರಿದ್ದರು.