ಮಡಿಕೇರಿ, ಆ. ೧೭: ಜಿಲ್ಲಾ ಕೇಂದ್ರ ಮಡಿಕೇರಿಯ ಹೃದಯಭಾಗದಲ್ಲೇ ಇರುವ ನಗರದ ನಾಲ್ಕು ಶಕ್ತಿದೇವತೆಗಳ ಪೈಕಿ ಒಂದಾಗಿರುವ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಕಳೆದ ರಾತ್ರಿ ಕಳ್ಳತನ ನಡೆದಿದ್ದು, ಜನತೆ ಬೆಚ್ಚಿ ಬೀಳುವಂತಾಗಿದೆ. ನಗರದ ಪೆನ್ಶನ್ ಲೇನ್ ರಸ್ತೆಯಲ್ಲಿರುವ ಈ ದೇವಾಲಯದ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿರುವ ಕಳ್ಳರು ದೇವಾಲಯದ ಒಳಭಾಗದಲ್ಲಿರುವ ಭಂಡಾರ ಪೆಟ್ಟಿಗೆ ಒಡೆದು ಅಲ್ಲಿದ್ದ ಅಂದಾಜು ಸುಮಾರು ರೂ.೨ ಲಕ್ಷಕ್ಕೂ ಹೆಚ್ಚು ನಗದು ಹಣ ಸೇರಿದಂತೆ ದೇವಿಯ ಚಿನ್ನದ ಸರ, ಬೆಳ್ಳಿಯ ಕಿರೀಟ, ಕಣ್ಣಿನ ಆಭರಣ ಇತ್ಯಾದಿ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ತಡರಾತ್ರಿ ಈ ಘಟನೆ ನಡೆದಿರುವ ಸಂಶಯ ವ್ಯಕ್ತವಾಗಿದೆ. ನಿನ್ನೆ ರಾತ್ರಿ ದಸರಾ ರಶೀದಿ ಪುಸ್ತಕಗಳಿಗೆ ದೇವಾಲಯ ಸಮಿತಿ ಸದಸ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ದಸರಾಗೆ ದೇಣಿಗೆ ಸಂಗ್ರಹ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಇದಾದ ಬಳಿಕ ರಾತ್ರಿ ೧೦ ಗಂಟೆಗೆ ದೇವಾಲಯಕ್ಕೆ ಬೀಗ ಹಾಕಲಾಗಿತ್ತು. ತಡರಾತ್ರಿ ಕಳ್ಳತನ ನಡೆದಿದೆ.
ಇಂದು ಬೆಳಿಗ್ಗೆ ದೇವಾಲಯದ ಪೂಜಾರಿ ಅನೀಶ್ ಅವರು ಎಂದಿನAತೆ ನಿತ್ಯಪೂಜೆಗೆ ಆಗಮಿಸಿದ ಸಂದರ್ಭ ಈ ಕೃತ್ಯ ನಡೆದಿರುವುದು ತಿಳದುಬಂದಿದೆ. ಬೀಗ ಮುರಿದು ಬಾಗಿಲು ತೆಗೆದು ಒಳಪ್ರವೇಶಿಸಿರುವ ಕಳ್ಳರು ಕೃತ್ಯದ ಬಳಿಕ ಬಾಗಿಲನ್ನು ಹಾಕಿ ಪರಾರಿಯಾಗಿದ್ದಾರೆ. ಬಾಗಿಲಿಗೆ ಹಾಕಿದ್ದ ಬೀಗ ಮುರಿದಿದ್ದು ಗೋಚರಿಸಿದ ನಂತರ ಕಳ್ಳತನ ನಡೆದಿರುವ ಬಗ್ಗೆ ತಿಳಿದಿದೆ. ಘಟನೆ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಟ್ರಸ್ಟ್ , ಯುವಕ ಮಿತ್ರ ಮಂಡಳಿ ಮೂಲಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.
ಸ್ಥಳಕ್ಕೆ ಶ್ವಾನದಳ ಸಹಿತವಾಗಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಮಡಿಕೇರಿ ನಗರ ಠಾಣಾಧಿಕಾರಿ ಲೋಕೇಶ್, ಸಂಚಾರಿ ಠಾಣಾಧಿಕಾರಿ
(ಮೊದಲ ಪುಟದಿಂದ) ಶ್ರೀಧರ್ ಹಾಗೂ ಸಿಬ್ಬಂದಿಗಳು ಬೆಳಿಗ್ಗೆ ವಿಷಯ ಅರಿತೊಡನೆ ದೇಗುಲಕ್ಕೆ ದೌಢಾಯಿಸಿ ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ತಪಾಸಣೆ ನಡೆಸಿದ್ದಾರೆ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ನಗರದಲ್ಲಿ ಕೆಲ ಸಮಯಗಳಿಂದ ಕಳ್ಳತನದಂತಹ ಕೃತ್ಯಗಳು ನಡೆದಿರಲಿಲ್ಲ. ಇದೀಗ ಮಳೆ, ಚಳಿಯ ನಡುವೆ ಕಳ್ಳತನ ನಡೆದಿರುವ ಘಟನೆ ಆತಂಕ ಮೂಡಿಸಿದೆ. ಸದ್ಯದಲ್ಲೇ ದಸರಾ ಉತ್ಸವವೂ ಎದುರಾಗಲಿದ್ದು, ಇದರ ತಯಾರಿಯ ನಡುವೆ ಶಕ್ತಿ ದೇವತೆಗಳ ಪೈಕಿ ಒಂದಾದ ಈ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಗಂಭೀರ ಎನಿಸಿದೆ. ದೇಗುಲದಲ್ಲಿ ಅಳವಡಿಸಲಾಗಿರುವ ಸಿ.ಸಿ. ಕ್ಯಾಮರಾವನ್ನು ಪರಿಶೀಲನೆ ನಡೆಸಲಾಯಿತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.