ಕಣಿವೆ, ಆ. ೧೮ : ದೇಶಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳು ಕಳೆದರೂ ಕೂಡ ಕೊಡಗು ಜಿಲ್ಲೆಯಲ್ಲಿ ಆದಿ ಕಾಲದಿಂದಲೂ ಬದುಕು ನಡೆಸುತ್ತಿರುವ ಅನೇಕ ಗಿರಿಜನ ಹಾಡಿಗಳಿಗೆ ಸರ್ಕಾರದ ಮೂಲ ಸೌಲಭ್ಯಗಳೇ ಇಲ್ಲ.
ಜಿಲ್ಲೆಯ ಬಹಳಷ್ಟು ಗಿರಿಜನ ಹಾಡಿಗಳಲ್ಲಿ ವಾಸವಿರುವ ಬಹುತೇಕ ಅಮಾಯಕ ಗಿರಿಜನ ನಿವಾಸಿಗಳು ಬಿದ್ದು ಹೋಗುವಂತಿರುವ ಹಳೆಯ ಸೂರುಗಳ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಿದರೆ, ಇನ್ನೂ ಅನೇಕ ಮಂದಿ ಕಾಡಿನಲ್ಲಿ ಸಿಗುವ ಮರದ ರೆಂಬೆಗಳ ಸಹಾಯದಿಂದ ಗುಡಿಸಲು ಮಾಡಿ ಅದರ ಸುತ್ತಲೂ ಪ್ಲಾಸ್ಟಿಕ್ ಹೊದಿಸಿ ಸೂರು ನಿರ್ಮಿಸಿಕೊಂಡು ಅದೇ ಪ್ರಪಂಚ ಎಂಬAತೆ ಬದುಕು ಸವೆಸುತ್ತಿದ್ದಾರೆ.
ಸರಿ ಸುಮಾರು ಸ್ವಾತಂತ್ರö ಪೂರ್ವದಿಂದಲೂ ಬದುಕು ನಡೆಸುತ್ತಾ ಜೀವನವನ್ನು ಕಟ್ಟುತ್ತಾ ಬಂದಿರುವ ಕಾಡಿನ ಮಕ್ಕಳಿಗೆ ಇದುವರೆಗೂ ಜನರನ್ನಾಳಿದ ಯಾವುದೇ ಸರ್ಕಾರಗಳು ಪೂರಕವಾದ ಕಡ್ಡಾಯ ಶಿಕ್ಷಣವನ್ನೇ ಕೊಡಲು ಸಾಧ್ಯವಾಗಿಲ್ಲ.
ದೇಶ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಎಷ್ಟೇ ಸಾಧನೆಯ ಹಾದಿಯಲ್ಲಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಮಂದಿ ಕೊಡಗಿನ ಗಿರಿಜನ ಹಾಡಿಗಳಿಗೆ ಬಂದು ಇಲ್ಲಿನ ಶ್ರಮಿಕರ ಬದುಕನ್ನು ಕಣ್ಣಾರೆ ಕಂಡಿದ್ದೇ ಆದಲ್ಲಿ, ಇನ್ನೂ ನಾವು ಎಲ್ಲಿದ್ದೇವೆ ? ವ್ಯವಸ್ಥೆಗಳು ಯಾವ ಹಾದಿಯಲ್ಲಿವೆ. ಗಿರಿಜನರ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತೀ ವರ್ಷವೂ ಖರ್ಚು ಮಾಡುವ ಕೋಟ್ಯಾಂತರ ರೂಗಳ ಅನುದಾನ ಎಲ್ಲಿಗೆ ಹೋಗುತ್ತಿದೆ ಎಂಬ ಹತ್ತಾರು ಪ್ರಶ್ನೆಗಳು ಎಂತಹವರನ್ನು ಕಾಡದೇ ಇರಲಾರವು.
ಕನಿಷ್ಠ ಸೌಲಭ್ಯಗಳಿಲ್ಲದ ಕಾಡು ಹಾಡಿ
ಸೋಮವಾರಪೇಟೆ ತಾಲೂಕು ವ್ಯಾಪ್ತಿಗೆ ಒಳಪಡುವ ಬಾಣಾವರ ಮೀಸಲು ಅರಣ್ಯದ ರಾಜ್ಯ ಹೆದ್ದಾರಿಯಂಚಿನಲ್ಲಿ ಇರುವ ಜೇನು ಕುರುಬ ಮಂದಿ ಕಳೆದ ಮೂವತ್ತು ವರ್ಷಗಳಿಗೂ ಮುಂಚೆಯಿAದಲೂ ಇಲ್ಲಿ ಬಂದು ಬದುಕು ಕಟ್ಟಿಕೊಂಡು ಕಾಡು ಹಾಡಿ ಎಂಬ ಹೆಸರನ್ನು ಈ ವಾಸಸ್ಥಳಕ್ಕೆ ಇಟ್ಟುಕೊಂಡಿದ್ದಾರೆ. ಮುಖ್ಯ ರಸ್ತೆಯಿಂದ ನೂರು ಮೀಟರ್ ಒಳ ತೆರಳಿದಾಗ ಸಿಗುವ ಈ ಕಾಡು ಹಾಡಿಯಲ್ಲಿ ಸರ್ಕಾರದ ನಯಾಪೈಸೆಯ ಕನಿಷ್ಠ ಮೂಲ ಸೌಕರ್ಯ ಇಲ್ಲಿ ಕಾಣುವುದಿಲ್ಲ.
ಪ್ಲಾಸ್ಟಿಕ್ ಹೊದಿಕೆಯ ಸೂರುಗಳು
ಈ ಹಾಡಿಯಲ್ಲಿ ೧೫ ಕ್ಕೂ ಹೆಚ್ಚಿನ ಕುಟುಂಬಗಳಿದ್ದು ಎಲ್ಲರೂ ಕೂಲಿ ಕಾರ್ಮಿಕರು. ಕೂಲಿ ಮಾಡಿ ಕೂಡಿಟ್ಟ ಹಣದಿಂದ ಹತ್ತಾರು ಸಾವಿರ ರೂಗಳು ಖರ್ಚು ಮಾಡಿ ಕಪ್ಪನೆಯ ಪ್ಲಾಸ್ಟಿಕ್ ಹೊದಿಕೆ ತಂದು ಸೂರುಗಳನ್ನು ಕಟ್ಟಿಕೊಂಡು ಜೀವಿಸುತ್ತಿದ್ದಾರೆ.
ವಿದ್ಯುತ್ ಕಂಡೇ ಇಲ್ಲ
ಈ ಹಾಡಿಯ ಮಂದಿ ಕಳೆದ ೩೦ ವರ್ಷಗಳಿಂದಲೂ ಇದುವರೆಗೂ ವಿದ್ಯುತ್ ಬೆಳಕನ್ನೇ ಕಾಣದೇ ಕತ್ತಲೆಯಲ್ಲಿಯೇ ಬದುಕು ಕಟ್ಟಿಕೊಂಡು ಆದಿಮಾನವರಂತೆ ದಿನಗಳೆಯುತ್ತಿರುವುದನ್ನು ಕಂಡರೆ ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಎಂತಹವರಿಗೂ ವ್ಯವಸ್ಥೆಯ ಮೇಲೆ ಆಕ್ರೋಶ ಪುಟಿದೇಳುತ್ತದೆ.
ಜೋರು ಗಾಳಿ ಬೀಸಿದರೆ ಹಾರಿ ಹೋಗುವ, ಎಡಬಿಡದೇ ಮಳೆ ಸುರಿದರೆ ನೀರು ನುಗ್ಗುವ ಈ ಸೂರುಗಳಲ್ಲಿ ಇಲ್ಲಿನ ಮಂದಿಗೆ ರಾತ್ರಿ ವೇಳೆ ಕೊನೆ ಪಕ್ಷ ವಿದ್ಯುತ್ ಬೆಳಕನ್ನಾದರೂ ಕರುಣಿಸಿದಲ್ಲಿ ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ. ಆದರೆ ಅದು ಜಿಲ್ಲೆಯನ್ನಾಳುವ ಯಾವ ರಾಜಕಾರಣಿಗೂ, ಅಧಿಕಾರಿಗಳಿಗೂ ಸಾಧ್ಯವಾಗದಿರುವುದು ರಾಜಕೀಯ ವ್ಯವಸ್ಥೆಯ ದುರಂತ ಎನಿಸುತ್ತದೆ.
ದೂರದಲ್ಲಿ ಕುಡಿಯುವ ನೀರು
ಈ ಮಂದಿ ಕಷ್ಟಪಟ್ಟು ಸೂರುಗಳನ್ನು ಕಟ್ಟಿಕೊಂಡಿರುವ ಆಸುಪಾಸಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬಹುದಿತ್ತು. ಆದರೆ ರಸ್ತೆಯ ಬದಿಯಲ್ಲಿ ಕುಡಿಯುವ ನೀರಿನ ತೊಟ್ಟಿಯನ್ನು ಇಟ್ಟಿರುವ ಗೋಣಿಮರೂರು ಗ್ರಾಮ ಪಂಚಾಯಿತಿ ಎಷ್ಟೋ ವರ್ಷಗಳಿಂದ ಆ ತೊಟ್ಟಿಯನ್ನೇ ಸ್ವಚ್ಛ ಮಾಡಿಲ್ಲ. ಕೂಲಿಯರಸಿ ದೂರದ ತೋಟಗಳಿಗೆ ತೆರಳುವ ಇಲ್ಲಿನ ಶ್ರಮಿಕರು ರಾತ್ರಿ ಹೊತ್ತಲ್ಲಿ ಕತ್ತಲೆಯಲ್ಲಿ ನೀರನ್ನು ಹೊತ್ತು ಗುಡಿಸಲಿಗೆ ತಂದು ಕುಡಿಯಬೇಕಾದ ಅನಿವಾರ್ಯತೆ ಇದೆ.
ಶೌಚಾಲಯ ಮೊದಲೇ ಇಲ್ಲ
ಇಲ್ಲಿನ ಮಂದಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಗಿರಿಜನ ಇಲಾಖೆ ಯಾವೊಬ್ಬ ನಿವಾಸಿಗಳಿಗೂ ಶೌಚಾಲಯವನ್ನು ನಿರ್ಮಿಸಿಕೊಡದ ಕಾರಣ ಕಾಡಾನೆಗಳ ಕಾಟ ಇರುವ ಈ ಕಾಡಿನಲ್ಲಿ ಬೆಳಿಗ್ಗೆ ಸಂಜೆ ಕಾಡಾನೆಗಳಿವೆಯಾ ಎಂದು ದೂರದವರೆಗೂ ನೋಡಿ ಅನಂತರ ಈ ಮಂದಿ ಬಹಿರ್ದೆಸೆಗೆ ಕಾಡನ್ನೇ ಅವಲಂಬಿಸುವ ದುಸ್ಥಿತಿ ಬಂದೊದಗಿದೆ. ಇಲ್ಲಿನ ಗಿರಿಜನ ವಾಸಿಗಳು ಮಕ್ಕಳು ಹಾಗೂ ಪೋಷಕರಾದಿಯಾಗಿ ತೋಟಗಳಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ.ಹಾಗಾಗಿ ಏನೋ ತಾತ, ಮುತ್ತಾತ, ಅಪ್ಪ ಎಲ್ಲರೂ ಮಾಡಿದ ಹಾಗೆ ನಾನೂ ಕೂಡ ಕೂಲಿ ಮಾಡಿಯೇ ಬದುಕಬೇಕಲ್ಲ ಎನ್ನುತ್ತಾರೆ ಹಾಡಿಯ ನಿವಾಸಿಗಳಾದ ಪುನೀತ್, ಅಭಿಷೇಕ್, ಸುನಿಲ್, ಅಂಬಿಕಾ. ನಮಗೇನೋ ವಿದ್ಯುತ್ ಬೆಳಕಿನ ಸೌಲಭ್ಯ ಸಿಗಲಿಲ್ಲ. ನಮ್ಮ ಮಕ್ಕಳಿಗಾದ್ರೂ ಸಿಗುತ್ತಾ ಅಂದರೆ ಅದೂ ಇಲ್ಲ. ಹಾಗಾಗಿ ಶಾಲೆಗೆ ಹೋಗಿ ಏನು ಮಾಡೋಕೆ ಇರೋದು.
ಏನು ಹೊಟ್ಟೆ ತುಂಬುತ್ತಾ ? ನಾನು ೩೦ ವರ್ಷಗಳಿಂದ ಈ ಹಾಡಿಯಲ್ಲಿ ಇದ್ದೀನಿ. ಯಾವತ್ತೂ ಕೂಡ ಯಾರೂ ಕೂಡ ಬಂದು ನಮ್ಮ ಕಷ್ಟ ಕೇಳಿಲ್ಲ ಎಂದು ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಷ ಹೊರಹಾಕುವ ನಿವಾಸಿ ಚಂದ್ರಿ, ಕಮಲ, ರಾಣಿ, ಭಾಗ್ಯ ಮೊದಲಾದವರು, ನಮ್ಮ ಮಕ್ಕಳು ಕೂಲಿ ಮಾಡಿ ತಗೊಂಡಿರೋ ಮೊಬೈಲ್ ಚಾರ್ಜ್ ಮಾಡೋಕೆ ತೋಟಗಳ ಮಾಲೀಕರ ಮನೆಗೆ ಹೋಗಬೇಕು. ಅಲ್ಲಿ ಚಾರ್ಜ್ ಆದರೆ ಮಾತ್ರ ನಮ್ಮ ಗುಡಿಸಲಲ್ಲಿ ಬೆಳಕು. ಇಲ್ಲವೇ ಬದುಕೇ ಕತ್ತಲು ಅಲ್ವಾ ಬಿಡಿ ಅಂತಾ ಚಂದ್ರಿ ಹೇಳ್ತಾರೆ.
ಇನ್ನಾದರೂ ಜಿಲ್ಲಾಡಳಿತ ಅಥವಾ ಕ್ಷೇತ್ರದ ಯುವ ಶಾಸಕರಾದ ಡಾ.ಮಂತರ್ಗೌಡರು ಅಧಿಕಾರಿಗಳೊಂದಿಗೆ ಹಾಡಿಗೆ ಭೇಟಿ ನೀಡುವ ಮೂಲಕ ಈ ಅಮಾಯಕ ಮಂದಿಯ ಕತ್ತಲೆಯ ಬದುಕಿಗೆ ಬೆಳಕು ನೀಡುವರಾ ಕಾದುನೋಡಬೇಕಿದೆ.
ವಿಶೇಷ ವರದಿ : ಕೆ.ಎಸ್.ಮೂರ್ತಿ