ಗೋಣಿಕೊಪ್ಪಲು/ ಸಿದ್ದಾಪುರ, ಆ. ೧೮: ಆಹಾರ ಹುಡುಕಿಕೊಂಡು ತೋಟಕ್ಕೆ ಬಂದು ನಂತರ ಕೆರೆಯ ನೀರು ಕುಡಿದು ವಾಪಾಸು ತೆರಳುತ್ತಿದ್ದ ವೇಳೆ ಕಾಡಾನೆಯೊಂದು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕಳತ್ಮಾಡು ಹೊಸ ತೋಟದ ಬಳಿ ನಡೆದಿದೆ. ಯಾಸಿನ್ ಜಸ್ಮೀನ್ ಎಂಬವರ ತೋಟದಲ್ಲಿ ಮೃತಪಟ್ಟ ಭಾರಿ ಗಾತ್ರದ ಕಾಡಾನೆಗೆ ಅಂದಾಜು ೩೫ ವರ್ಷ ಪ್ರಾಯವಾಗಿರಬಹುದು ಎಂದು ಅರಣ್ಯ ಇಲಾಖೆ ಅಂದಾಜು ಮಾಡಿದೆ. ಸುದ್ದಿ ತಿಳಿದು ಅರಣ್ಯ ಇಲಾಖೆಯ ಡಿಎಫ್ಓ ಜಗನ್ನಾಥ್, ತಿತಿಮತಿ ವಲಯದ ಎಸಿಎಫ್ ಗೋಪಾಲ್, ಪೊನ್ನಂಪೇಟೆ ವಲಯದ ಆರ್.ಎಫ್.ಒ ಶಂಕರ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಮೇಲ್ನೋಟಕ್ಕೆ ಕಾಡಾನೆಯ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ಹೃದಯಾಘಾತದಿಂದ ಆನೆಯು ಮೃತಪಟ್ಟಿರಬಹುದೆಂದು ಅಂದಾಜು ಮಾಡಲಾಗಿದೆ.
ತಾ.೧೯ ರಂದು (ಇಂದು) ಅರಣ್ಯ ಇಲಾಖೆಯ ಹಿರಿಯ ವೈದ್ಯಕೀಯ ತಂಡ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. - ಹೆಚ್.ಕೆ. ಜಗದೀಶ್, ವಾಸು