ಸಿದ್ದಾಪುರ, ಆ. ೧೮: ಶ್ರೀ ನಾರಾಯಣ ಗುರು ಜಯಂತಿಯನ್ನು ಅದ್ಧೂರಿಯಾಗಿ ಆಚರಿಸ ಲಾಗುವುದೆಂದು ಎಸ್ಎನ್ಡಿಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಹೇಳಿದರು.
ಈ ಕುರಿತು ಯೂನಿಯನ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ತಾ.೨೦ ರಂದು ಎಸ್ಎನ್ಡಿಪಿ ಕೊಡಗು ಯೂನಿಯನ್ ವತಿಯಿಂದ ಶ್ರೀ ನಾರಾಯಣ ಗುರುಗಳ ಜಯಂತಿ ಆಚರಿಸಲು ಉದ್ದೇಶಿಸಲಾಗಿದ್ದು, ಉತ್ಸವದ ಅಂಗವಾಗಿ ಬೆಳಿಗ್ಗೆ ೯.೩೦ಕ್ಕೆ ಗುರುಪೂಜೆ, ೧೦ ಗಂಟೆಗೆ ಧ್ವಜಾರೋಹಣವನ್ನು ಟಿ.ಕೆ. ರಘು ನೆರವೇರಿಸಲಿದ್ದಾರೆ. ನಂತರ ಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಅಲಂಕೃತ ಭವ್ಯ ಮಂಟಪದಲ್ಲಿಟ್ಟು ಮೆರವಣಿಗೆಗೆ ಪಿ.ಎ. ಸುಕುಮಾರನ್ ಚಾಲನೆ ನೀಡಲಿದ್ದಾರೆ. ನಂತರ ಸಿದ್ದಾಪುರ ಸ್ವರ್ಣಮಾಲಾ ಸಭಾಂಗಣದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮವನ್ನು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ, ಮಾಜಿ ಸಭಾಪತಿ ಕೆ.ಜಿ. ಬೋಪಯ್ಯ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತೀತಿರ ಅಧ್ಯಕ್ಷ ಧರ್ಮಜ ಉತ್ತಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಮುಖರಾದ ವಿ.ಎಂ. ವಿಜಯನ್, ರಘು ಆನಂದ್, ಟಿ.ಎಲ್. ಪ್ರವೀಣ್, ಕುಕ್ಕೇರ ಉತ್ತಪ್ಪ ಸೇರಿದಂತೆ ಗಣ್ಯರು ಭಾಗವಹಿಸಿಲಿದ್ದಾರೆ.
ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕರಿಗೆ ಸನ್ಮಾನ ಹಾಗೂ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿ ಉತ್ತೀರ್ಣರಾಗಿರುವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಉತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆಗಮಿಸುವವರಿಗೆ ಓಣಂ ಭೋಜನ (ಸಧ್ಯ) ಏರ್ಪಡಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಎಸ್ಎನ್ಡಿಪಿ ಯೂನಿಯನ್ ಉಪಾಧ್ಯಕ್ಷ ಆರ್. ರಾಜನ್, ಕಾರ್ಯದರ್ಶಿ ಪ್ರೇಮಾನಂದ, ಆಚರಣಾ ಸಮಿತಿ ಅಧ್ಯಕ್ಷ ಪಾಪಯ್ಯ, ಕಾರ್ಯದರ್ಶಿ ಎಂ.ಜಿ. ರಾಮು, ಸಿದ್ದಾಪುರ ಎಸ್ಎನ್ಡಿಪಿ ವನಿತಾ, ಯೂನಿಯನ್ ಅಧ್ಯಕ್ಷೆ ರೀಶಾ ಸುರೇಂದ್ರ ಹಾಜರಿದ್ದರು.