ಮಡಿಕೇರಿ, ಆ. ೧೫ : ಆರು ವರ್ಷಗಳ ಹಿಂದೆ ಕೊಡಗಿನಲ್ಲಿ ೨೦೧೮ ರ ಮಳೆರಾಯನ ಕೋಪ ಈ ನಾಡಿನ ಜನತೆಗೆ ಮರೆಯಲಸಾಧ್ಯ ದುರಂತ ತಂದೊಡ್ಡಿತು. ಕೇರಳ ಗಡಿ ಮಾಕುಟ್ಟದಿಂದ ತುಳುನಾಡಿನ ಸಂಪಾಜೆ ಗಡಿ ಮೊದಲ್ಗೊಂಡು ಮೈಸೂರು ಜಿಲ್ಲಾ ಗಡಿ ಕುಶಾಲನಗರ ಸುತ್ತಮುತ್ತ ಹಾಗೂ ಶಿರಂಗಾಲ ಬಾಣಾವರದೊಂದಿಗೆ ಹಾಸನದ ಗಡಿ ಕೊಡ್ಲಿಪೇಟೆ ಸಹಿತ ಪುಷ್ಪಗಿರಿ ತಪ್ಪಲಿನ ಗ್ರಾಮಗಳ ಆದಿಯಾಗಿ ಕೋಟೆಬೆಟ್ಟ ತಪ್ಪಲಿನ ಗ್ರಾಮಗಳಲ್ಲಿ ಅದುವರೆಗೆ ಯಾರೂ ಕಾಣದ ಅಪಾಯ ಎದುರಾಗಿತ್ತು.

ಹೀಗಾಗಿ ಮದೆನಾಡು ವ್ಯಾಪ್ತಿಯಲ್ಲಿ ಜೋಡುಪಾಲ, ೨ನೇ ಮೊಣ್ಣಂಗೇರಿ, ಕಾಟಕೇರಿ, ಮಕ್ಕಂದೂರು, ಹೆಮ್ಮೆತ್ತಾಳು, ಹಾಲೇರಿ, ಕಾಂಡನಕೊಲ್ಲಿ, ಮಾದಾಪುರ ಸಮೀಪದ ಮೂವತ್ತೊಕ್ಲು ಮುಂತಾದೆಡೆ ಎದುರಾಗಿದ್ದ ಪ್ರತ್ಯೇಕ ದುರ್ಘಟನೆಯಿಂದ ಒಟ್ಟು ೨೧ ಮಂದಿ ಪ್ರಾಣ ಕಳೆದುಕೊಂಡರು.

ಮದೆ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿನಿ ಮಂಜುಳ ಎಂಬ ಹೆಣ್ಣು ಮಗಳ ಸುಳಿವು ಈ ತನಕವೂ ಲಭಿಸದೆ ಹೆತ್ತವರು ಮರುಗುತ್ತಿದ್ದಾರೆ.

ಆ ವರ್ಷದ ಮಳೆಗಾಲ ಕೊಡಗು ಜಿಲ್ಲೆಯಲ್ಲಿ ದ್ವೀಪದಂತಹ ಪರಿಸ್ಥಿತಿ ಸೃಷ್ಟಿಸಿತ್ತು.

ದೈನಂದಿನ ಆಗು - ಹೋಗುಗಳನ್ನು ನಿತ್ಯ ಬೆಳಿಗ್ಗೆ ಜನತೆಯ ಮನೆಗಳಿಗೆ ತಲುಪಿಸುತ್ತಿದ್ದ ಶಕ್ತಿ ಪತ್ರಿಕಾಲಯವೂ ಅಕ್ಷರಶಃ ಜಲಾವೃತಗೊಂಡು ವಾರ ಕಾಲ "ಶಕ್ತಿ" ಸ್ಥಗಿತಗೊಂಡಿತ್ತು. ಕೈಗಾರಿಕಾ ಬಡಾವಣೆಯ ರಾಜಕಾಲುವೆ ಪಕ್ಕದ ಬರೆ ಕುಸಿತ ಉಂಟಾಗಿ ಪತ್ರಿಕಾಲಯ ಸೇರಿದಂತೆ ಇಡೀ ಬಡಾವಣೆಯ ಉದ್ದಿಮೆಗಳು ಸ್ಥಬ್ಧಗೊಂಡು ಆಯಾ ಮಾಲೀಕರು ಮತ್ತು ಸಿಬ್ಬಂದಿಗಳು ಆತಂಕಗೊAಡಿದ್ದ ಚಿತ್ರಣ ಕಂಡುಬAದಿತ್ತು. ಮಡಿಕೇರಿ ಜಿಲ್ಲಾ ಕೇಂದ್ರದಲ್ಲಿ ಅನೇಕ ಜನವಸತಿಗಳಲ್ಲಿ ಭೂ ಕುಸಿತದಿಂದ ನಿವಾಸಿಗಳು ಮನೆ, ಅಂಗಡಿಗಳನ್ನು ಕಳೆದುಕೊಂಡರು. ಹಿಂದಿನ ಖಾಸಗಿ ಬಸ್ ನಿಲ್ದಾಣದ ಬಳಿ ಬೆಟ್ಟದ ಕುಸಿತದೊಂದಿಗೆ ನಿಲ್ದಾಣ ಶಾಶ್ವತ ಸ್ಥಳಾಂತರಗೊಳ್ಳಬೇಕಾಯಿತು. ನಿತ್ಯ ಜನತೆಯ ಸಂಕಷ್ಟಕ್ಕೆ ಸ್ಪಂದಿಸಲು ಶ್ರಮಿಸುತ್ತಿದ್ದ ಶಕ್ತಿ ದೈನಿಕ ಕಚೇರಿ ಸಹಿತ ಇಡೀ ಮುದ್ರಣ ವಿಭಾಗ ಆಗಸ್ಟ್ ೧೬ರ ಸಂಜೆ ಜಲ ದಿಗ್ಬಂಧನಕ್ಕೆ ಸಿಲುಕಿದ ಕರುಣಾಜನಕ ದೃಶ್ಯ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಅಲ್ಲದೆ ಅಂದಿನ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರ ಸಕಾರಾತ್ಮಕ ಸ್ಪಂದನೆಯಿAದ ಪತ್ರಿಕಾಲಯದಲ್ಲಿ ಸಿಲುಕಿಕೊಂಡಿದ್ದ ಮಾಲೀಕರು ಹಾಗೂ ಉದ್ಯೋಗಿ ಬಳಗವನ್ನು ರಾತ್ರಿ ವೇಳೆಗೆ ಅವರವರ ಮನೆಗೆ ತಲುಪಿಸಿದ್ದು ವರ್ಷಗಳೇ ಉರುಳಿದರೂ ನೆನಪು ಮಾಸಿಲ್ಲ. ದಿನಗಳು ಉರುಳಿದಂತೆ ನೀರು ಇಳಿಕೆಯಾದಾಗ "ಶಕ್ತಿ" ಕುಟುಂಬದ ಅನೇಕರು ಹಿತೈಷಿಗಳು ಧಾವಿಸಿ ಬಂದು ಇಡೀ ಕಟ್ಟಡ ಹಾಗೂ ಯಂತ್ರೋಪಕರಣ ಶುಚಿಗೊಳಿಸುವಲ್ಲಿ ಅಭಯ ನೀಡಿದ್ದಾರೆ. ಆ ಮಾನವೀಯ ಮಿಡಿತ ಅಥವಾ ಸ್ಪಂದನಕ್ಕೆ ‘ಶಕ್ತಿ’ ಬಳಗ ಸದಾ ಕೃತಜ್ಞತೆಯಿಂದ ನಮನಗೈಯ್ಯುತ್ತಿದೆ. ಈ ವರ್ಷದ ವಯನಾಡು ಹಾಗೂ ಕರ್ನಾಟಕದ ಶೀರೂರು ದುರಂತ ಮತ್ತು ಇತರೆಡೆಗಳಲ್ಲಿನ ಅನಾಹುತಗಳು ೨೦೧೮ರ ಕೊಡಗು ದುರಂತವನ್ನು ಮೆಲುಕು ಹಾಕುವಂತೆ ಮಾಡಿದೆ. ಕಾಲಾತೀತನ ಲೀಲೆ ಬಲ್ಲವರಾರು.

-ಚಿ.ನಾ. ಸೋಮೇಶ್.