ಶನಿವಾರಸಂತೆ, ಆ. ೧೫: ಮುಚ್ಚುವ ಹಂತ ತಲುಪಿದ್ದ ಸರ್ಕಾರಿ ಪ್ರೌಢಶಾಲೆಯೊಂದನ್ನು ಮುಖ್ಯ ಶಿಕ್ಷಕರೊಬ್ಬರು ಕೂಡಿಟ್ಟ ತಮ್ಮ ವೇತನದಲ್ಲಿ ರೂ.೧ ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಿ, ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿಪಡಿಸಿ ವಿದ್ಯಾರ್ಥಿಗಳ ಸಂಖ್ಯೆಯನ್ನು ೨೫ಕ್ಕೆ ಹೆಚ್ಚಳ ಮಾಡಿ ಔದಾರ್ಯ ಮೆರೆದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಮೀಪದ ಗಡಿಭಾಗ ಈಚಲುಬೀಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕತೆಯಿದು. ೨೦೨೪-೨೫ ನೇ ಸಾಲಿನಲ್ಲಿ ಶಾಲೆಯಲ್ಲಿ ಕೇವಲ ೪ ವಿದ್ಯಾರ್ಥಿಗಳ ದಾಖಲಾತಿ ಮಾತ್ರವಿದ್ದು ಮುಚ್ಚುವ ಹಂತದಲ್ಲಿತ್ತು. ಆ ಸಮಯದಲ್ಲಿ ಗ್ರಾಮಸ್ಥರು ಮುಖ್ಯಶಿಕ್ಷಕ, ಸಹಶಿಕ್ಷಕರ ಸಹಯೋಗದೊಂದಿಗೆ ಶಾಲಾ ವ್ಯಾಪ್ತಿಗೆ ಒಳಪಡುವ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಗೆ ೨೦೨೪ರ ಮೇ ತಿಂಗಳಿನಿAದಲೇ ಮನೆಮನೆಗೆ ಭೇಟಿ ನೀಡಿ ಪೋಷಕರ ಮನವೊಲಿಸಿದ್ದರು. ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಮಕ್ಕಳನ್ನು ಕರೆತಂದು ದಾಖಲಾತಿಯನ್ನು ಮಾಡಿ ವಿದ್ಯಾರ್ಥಿಗಳ ಸಂಖ್ಯೆಯನ್ನು ೨೫ಕ್ಕೆ ಹೆಚ್ಚಳ ಮಾಡಿದ್ದು ದಾಖಲಾತಿ ಮುಂದುವರೆದಿದೆ.

ಮುAದಿನ ದಿನಗಳಲ್ಲಿ ಶಾಲಾ ದಾಖಲಾತಿಯನ್ನು ಮತ್ತಷ್ಟು ಹೆಚ್ಚಿಸಿ, ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ೭೮ನೇ ಸ್ವಾತಂತ್ರೊö್ಯÃತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾನುವಾರ ಮುಖ್ಯಶಿಕ್ಷಕ ಎಚ್. ರಾಜನಾಯಕ್ ತಮ್ಮ ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಶಾಲಾ ಆವರಣವನ್ನು ಗಿಡಗಂಟಿ ಕಡಿದು ಸ್ವಚ್ಛಗೊಳಿಸಿ, ತಂತಿಬೇಲಿ ಅಳವಡಿಸಿ, ಹೂದೋಟ ಹಾಗೂ ತರಕಾರಿ ತೋಟವನ್ನು ನಿರ್ಮಿಸುವ ಮೂಲಕ ಶ್ರಮದಾನ ಮಾಡಿ ಶಾಲಾಭಿವೃದ್ಧಿಗೆ ಶ್ರಮಿಸಿದ್ದಾರೆ. ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗೆ ಜೀವದಾನ ನೀಡಿದ್ದಾರೆ.

ಮುಖ್ಯಶಿಕ್ಷಕ ಎಚ್.ರಾಜನಾಯಕ್‌ರ ಔದಾರ್ಯ, ಮಾನವೀಯತೆ, ಶಾಲಾಭಿಮಾನ ಇತರ ಶಿಕ್ಷಕರಿಗೆ ಮಾದರಿಯಾಗಲಿ ಎಂದು ಗ್ರಾಮಸ್ಥರು ಶ್ಲಾಘಿಸಿರುತ್ತಾರೆ.