ಸೋಮವಾರಪೇಟೆ, ಆ. ೧೬: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹಾಗೂ ಸಿ ಮತ್ತು ಡಿ ಭೂಮಿಯನ್ನು ವ್ಯವಸಾಯ ಭೂಮಿ ಎಂದು ಪರಿವರ್ತಿಸಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ತಾ.೧೯ರಂದು ಪಟ್ಟಣದಲ್ಲಿ ರೈತರ ಬೃಹತ್ ಮೌನ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ರೈತ ಹೋರಾಟ ಸಮಿತಿಯ ಸಂಚಾಲಕ ಕೆ.ಬಿ.ಸುರೇಶ್ ಹೇಳಿದರು.
ಅಂದು ಬೆಳಿಗ್ಗೆ ೧೦ಗಂಟೆಗೆ ಒಕ್ಕಲಿಗರ ಸಮುದಾಯಭವನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಲಿದ್ದು, ಪಟ್ಟಣದ ಜೇಸಿ ವೇದಿಕೆಯಲ್ಲಿ ಸಮಾವೇಶಗೊಳ್ಳಲಿದೆ. ಮಡಿಕೇರಿ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು, ಡಿಸಿಎಫ್ ಸ್ಥಳಕ್ಕೆ ಬಂದು ರೈತರ ಮನವಿಯನ್ನು ಸ್ವೀಕರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಿ ಮತ್ತು ಡಿ ಜಾಗವೆಂದು ಅವೈಜ್ಞಾನಿಕವಾಗಿ ವರ್ಗೀಕರಿಸಿರುವ ಭೂಮಿಯನ್ನು ರಕ್ಷಿತ ಅರಣ್ಯವೆಂದು ಘೋಷಣೆ ಮಾಡಲು ಸರ್ಕಾರ ಮುಂದಾಗಿದೆ. ಅರಣ್ಯ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯಿಂದ ರೈತರಿಗೆ ನೋಟೀಸು ಜಾರಿಯಾಗುತ್ತಿದೆ. ಸಿ ಮತ್ತು ಡಿ ಭೂಮಿ ರಕ್ಷಿತ ಅರಣ್ಯವೆಂದು ಘೋಷಿಸಿದರೆ ರೈತರು ಬೀದಿಪಾಲಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಾಂತಳ್ಳಿ ಹೋಬಳಿಯಲ್ಲಿರುವ ಬಹುತೇಕ ಗ್ರಾಮಗಳಲ್ಲಿ ರೈತರು ಕೃಷಿ ಮಾಡುತ್ತಿರುವ ಭೂಮಿ ಸಿ ಮತ್ತು ಡಿ ಭೂಮಿಯಾಗಿದೆ. ಕಳೆದ ಎರಡು ದಶಕಗಳಿಂದ ಈ ಭೂಮಿಯ ಹಕ್ಕುಪತ್ರಕ್ಕಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಆದರೆ ಕಂದಾಯ ಇಲಾಖೆಯಿಂದ, ರಾಜಕಾರಣಿಗಳಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಹೇಳಿದರು.ಸಿ ಮತ್ತು ಡಿ ಭೂಮಿಯ ಸರ್ವೆ ನಂಬರ್ಗಳನ್ನು ಮೀಸಲು ಅರಣ್ಯವಾಗಿ ಘೋಷಿಸಲು ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೆ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಸಿ ಮತ್ತು ಡಿ ಸರ್ವೆ ನಂ. ಗಳಲ್ಲಿ ಫಾರಂ ೫೦, ೫೩, ೫೭ನಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ಒಂದು ತಿಂಗಳ ಒಳಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಂಚಾಲಕರಾದ ಚೇತನ್, ನತೀಶ್ ಮಂದಣ್ಣ, ಗೌಡಳ್ಳಿ ಪೃಥ್ವಿ ಇದ್ದರು.