ವೀರಾಜಪೇಟೆ, ಆ. ೧೫: ಅರಮೇರಿಯ ಎಸ್ಎಂಎಸ್ ವಿದ್ಯಾಪೀಠದಲ್ಲಿ ಮಕ್ಕಳ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ಮಠದ ಗದ್ದೆಯಲ್ಲಿ ಈ ಬಾರಿಯೂ ಕೂಡ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಪ್ರಗತಿಪರ ರೈತ, ಉದ್ಯಮಿಗಳು ಆದ ಉದಿಯಂಡ ಚಂಗಪ್ಪ ಜ್ಯೋತಿ ಬೆಳಗುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಕೃಷಿ ಭೂಮಿಯೊಡನೆ ತಮಗಿರುವ ಸಂಬAಧ, ಕೃಷಿಯಿಂದ ರೈತ ಎದುರಿಸುವ ಸವಾಲುಗಳನ್ನು ಹೇಳುತ್ತಾ, ಅನ್ನದ ಒಂದೊAದು ಅಗುಳು ಕೂಡ ಎಷ್ಟೊಂದು ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಉಪದೇಶಿಸಿದರು.
ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಕೆಸರುಗದ್ದೆ ಕ್ರೀಡಾಕೂಟ ಕೇವಲ ಮನಸ್ಸಿನ ಮನರಂಜನೆಗಾಗಿ ಮಾತ್ರವಲ್ಲ, ಮಣ್ಣಿನಿಂದ ಹೇಗೆ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆಂಬುದನ್ನು ಇಂದಿನ ಮಕ್ಕಳು ಆಲೋಚನೆ ಮಾಡಬೇಕಿದೆ. ವಿದ್ಯಾರ್ಥಿಗಳು ಮಣ್ಣಿನ ಮೇಲೆ ಪ್ರೀತಿಯನ್ನು ಬೆಳೆಸಿಕೊಂಡರೆ ಕೆಸರುಗದ್ದೆಯಂತಹ ಕ್ರೀಡೋತ್ಸವಕ್ಕೆ ಮೌಲ್ಯ ಬರುತ್ತದೆ. ಕೆಸರುಗದ್ದೆಯ ಮಣ್ಣಿನ ಸುಗಂಧದ ಸೊಗಡು ಬೇರೆ ಯಾವುದರಿಂದಲೂ ನಮಗೆ ಸಿಗಲು ಸಾಧ್ಯವಿಲ್ಲ. ಕೃಷಿಗೆ ಪೂರಕವಾದ ಗೋವುಗಳ ಮೇಲು ವಿದ್ಯಾರ್ಥಿಗಳು ಪ್ರೀತಿಯನ್ನು ಬೆಳೆಸಿಕೊಳ್ಳಬೇಕಿದೆ. ಯಾವುದೇ ಹುದ್ದೆ ಮಾಡಿದರು ಪ್ರತಿಯೊಬ್ಬರು ಮಣ್ಣಿನೊಡನೆ ಸಂಪರ್ಕ ಇಟ್ಟುಕೊಂಡಿರಬೇಕು. ಭತ್ತದ ಕೃಷಿಯಿಂದ ಹೆಚ್ಚಿನ ಆದಾಯ ಇಲ್ಲದಿದ್ದರೂ ಕೃಷಿ ಸಂಸ್ಕೃತಿ ಕಣ್ಮರೆಯಾಗಬಾರದೆಂಬ ಕಾಳಜಿಯಿಂದ ಗದ್ದೆಯನ್ನು ನೆಡುವ ಕಾರ್ಯ ಮುಂದುವರೆಯುತ್ತಾ ಬಂದಿದೆ. ಮಕ್ಕಳು ಆಡಿ ಕುಣಿದು ಕುಪ್ಪಳಿಸಿದ ಗದ್ದೆಯು ಸಂತೋಷ ದಿಂದ ಹೆಚ್ಚಿನ ಇಳುವರಿ ಕೊಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಎಸ್.ಎಂ.ಎಸ್. ವಿದ್ಯಾಪೀಠದ ಪ್ರಾಂಶುಪಾಲರಾದ ಕುಸುಮ್ ಟಿಟೊ ಮಾತನಾಡಿ, ಸಾಂಪ್ರದಾಯಿಕ ಕೃಷಿ ಪದ್ಧತಿ ನಶಿಸುತ್ತಿರುವ ಕುರಿತು ಬೇಸರ ವ್ಯಕ್ತಪಡಿಸುತ್ತಾ, ೩೦೦ ವರ್ಷದ ಇತಿಹಾಸ ಇರುವ ಶ್ರೀ ಮಠದ ವಿದ್ಯಾಸಂಸ್ಥೆಯು ಕಳೆದ ೧೬ ವರ್ಷಗಳಿಂದ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು ವಿದ್ಯಾರ್ಥಿಗಳಿಗೆ ಭತ್ತದ ಗದ್ದೆಯು ನೈಜ ಅನುಭವವನ್ನು ನೀಡುತ್ತದೆ ಎಂದರು.
ವಿದ್ಯಾರ್ಥಿಗಳಿಗಾಗಿ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಮತ್ತು ಓಟದ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳು ಮನಸೋ ಇಚ್ಛೆ ಆಡಿ ಕೆಸರಿನಲ್ಲಿ ಮಿಂದೆದ್ದರು. ವಿದ್ಯಾರ್ಥಿಗಳಿಂದ ಕೆಸರಿನಲ್ಲಿ ರೋಚಕ ನೃತ್ಯ ಪ್ರದರ್ಶನ ಗೊಂಡು ಕ್ರೀಡೆಗೆ ಸಾಂಸ್ಕೃತಿಕ ಮೆರುಗನ್ನು ನೀಡಿತು. ಶಾಲಾ ಸಿಬ್ಬಂದಿಗಳು ಭಾಗಿಗಳಾಗಿ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದರು.