ಕುಶಾಲನಗರ, ಆ. ೧೪ : ಸಹಕಾರ ಸಂಘಗಳಲ್ಲಿ ಸರಕಾರ ಅಥವಾ ಅಧಿಕಾರಿಗಳು ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡಬಾರದು ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕುಶಾಲನಗರದ ನಂ ೧೨೨ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದ ಅಂಗವಾಗಿ ಗುಡ್ಡೆಹೊಸೂರು ಬಳಿ ರೂ.೧೬.೫ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶತಮಾನೋತ್ಸವ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಸಹಕಾರ ಸಂಘಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿವೆ.
ಸಹಕಾರಿ ಸಂಘಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಸಹಕಾರ ಸಂಘಕ್ಕೆ ತನ್ನದೇ ಆದ ಜವಾಬ್ದಾರಿ ಇದೆ.
ಜನರಿಂದ ಸ್ಥಾಪನೆಗೊಂಡ ಸಹಕಾರ ಸಂಘ ರೈತರ ಮೂಲಭೂತ ಹಕ್ಕಾಗಿದ್ದು ಅವರುಗಳ ಏಳಿಗೆಯ ಉದ್ದೇಶ ಹೊಂದಿದೆ.
ಸಹಕಾರ ಸಂಘಗಳು ಸ್ಥಳೀಯ ನಾಗರಿಕರ ಸಂಸ್ಥೆಯಾಗಿದ್ದು ರೈತರಿಗೆ ಸಾಲ ಸೌಲಭ್ಯ ಕೊಡುವುದರ ಜೊತೆಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುವAತೆ ಆಗಬೇಕು ಎಂದರು.
ಕುಶಾಲನಗರ ಸಂಘದ ಶರವಣಕುಮಾರ್ ನೇತೃತ್ವದಲ್ಲಿ ಎಲ್ಲ ನಿರ್ದೇಶಕರು ಒಟ್ಟಾಗಿ ಉತ್ತಮ ಯೋಜನೆಯನ್ನು ರೂಪಿಸಿರುವುದು ಹೆಮ್ಮೆಯ ವಿಚಾರ. ಜಿಲ್ಲೆಯಲ್ಲಿ ಹೆಚ್ಚಿನ ಸಹಕಾರ ಸಂಘಗಳಿಗೆ ದೊಡ್ಡ ಮಟ್ಟದ ಆರ್ಥಿಕ ಶಕ್ತಿ ಇಲ್ಲ. ಕುಶಾಲನಗರ ಸಂಘಕ್ಕೆ ಇದೆ. ಇದೊಂದು ಅದ್ಭುತ ಕಟ್ಟಡವಾಗಿ ಹೊರಹೊಮ್ಮಲಿದೆ.ಹೆಚ್ಚಿನ ಜನರು ಒಂದೆಡೆ ಸೇರಿ ಕಾರ್ಯಕ್ರಮ ನಡೆಸಲು ತುಂಬ ಅನುಕೂಲವಾಗಲಿದೆ.ಬೇಗ ಕಟ್ಟಡ ನಿರ್ಮಾಣವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಶಾಸಕ ಡಾ.ಮಂತರ್ ಗೌಡ ಅವರು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉದ್ದೇಶಿತ ಶತಮಾನೋತ್ಸವ ಭವನ ಕಟ್ಟಡ ವಿನ್ಯಾಸದ ತ್ರೀಡಿ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿ, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೂ.೧೬.೫ ಕೋಟಿ ವೆಚ್ಚದಲ್ಲಿ ಯೋಜನೆಯನ್ನು ರೂಪಿಸಿರುವುದು ಹೆಮ್ಮೆಯ ವಿಚಾರ. ಕುಶಾಲನಗರ ಸಂಘವು ಕೈಗೊಂಡಿರುವ ಯೋಜನೆಗಳನ್ನು ಜಿಲ್ಲೆಯ ಇತರ ಸಹಕಾರ ಸಂಘಗಳು ಮಾದರಿಯಾಗಿ ತೆಗೆದುಕೊಂಡು ಬೆಳವಣಿಗೆ ಹೊಂದಬೇಕು ಎಂದರು. ಈ ನೂತನ ಭವನದಿಂದ ಜಿಲ್ಲೆಯ ಜನರಿಗೆ ಅನುಕೂಲ ಉಂಟಾಗಲಿದೆ.
ಭವನದ ಕಾಮಗಾರಿ ಗುಣಮಟ್ಟದಿಂದ ನಡೆದು ಬೇಗ ಕಟ್ಟಡ ನಿರ್ಮಾಣವಾಗಲಿ ಎಂದು ಹೇಳಿದರು. ಭವನ ನಿರ್ಮಾಣವಾದ ನಂತರ ಬಡವರಿಗೆ ಹಾಗೂ ಜನಸಾಮಾನ್ಯರಿಗೆ ರಿಯಾಯಿತಿ ದರದಲ್ಲಿ ಅವಕಾಶ ಕಲ್ಪಿಸಿಕೊಡಬೇಕು. ಭವನದಲ್ಲಿ ಉತ್ತಮ ನಿರ್ವಹಣೆ ಹಾಗೂ ಸ್ವಚ್ಛತೆ ಕಾಪಾಡಬೇಕು. ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವ ಮೂಲಕ ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ, ಸಂಘವು ಕಳೆದ ಆರೇಳು ವರ್ಷದಿಂದ ಸತತವಾಗಿ ಕೋಟಿಗೂ ಮಿಗಿಲಾಗಿ ಲಾಭಗಳಿಸಿಕೊಂಡು ಬರುತ್ತಿದೆ. ಹಲವು ಏಳುಬೀಳುಗಳೊಂದಿಗೆ ಅಭಿವೃದ್ಧಿ ಕಂಡಿರುವ ಸಂಘವು ಕಳೆದ ಎರಡು ವರ್ಷಗಳ ಹಿಂದೆ ಅದ್ದೂರಿಯಾಗಿ ಶತಮಾನೋತ್ಸವ ಆಚರಿಸಿಕೊಂಡ ಸಂಭ್ರಮದಲ್ಲಿದೆ. ಶತಮಾನೋತ್ಸವ ಸವಿನೆನಪಿಗಾಗಿ ಗುಡ್ಡೆಹೊಸೂರು ಬಳಿ ೧.೮೦ ಎಕರೆ ಜಾಗ ಖರೀದಿಸಿ ಈ ಜಾಗದಲ್ಲಿ ರೂ.೧೬.೫ ಕೋಟಿ ವೆಚ್ಚದ ಆಧುನಿಕ ಸೌಲಭ್ಯ ಹೊಂದಿರುವ ಶತಮಾನೋತ್ಸವ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಕಟ್ಟಡ ನಿರ್ಮಾಣ ಸಮಿತಿ ಸಲಹೆಗಾರ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೈಗೊಂಡಿರುವ ಈ ಯೋಜನೆ ಜಿಲ್ಲೆಯ ಇತರ ಸಂಘಗಳಿಗೆ ಮಾದರಿಯಾಗಿದೆ. ಕುಶಾಲನಗರ ತಾಲೂಕಿನ ಇತಿಹಾಸದಲ್ಲಿ ಸಹಕಾರ ಸಂಘವೊAದರ ಐತಿಹಾಸಿಕ ಸಾಧನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಸದಸ್ಯರಾದ ಉಷಾ , ಬಿ.ಎಂ.ಪ್ರದೀಪ್, ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಎಪಿಸಿಎಂಎಸ್ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶರತ್, ಮೈಸೂರು ವಿಭಾಗದ ಸಹಕಾರ ಇಲಾಖೆಯ ಉಪ ನಿಬಂಧಕ ಎಚ್.ಆರ್.ವಿಜಯಕುಮಾರ್, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವಿ.ಎಸ್.ಆನಂದ ಕುಮಾರ್ , ನಿರ್ದೇಶಕರಾದ ಡಿ.ವಿ.ರಾಜೇಶ್, ಕವಿತಾ ಮೋಹನ್, ನೇತ್ರಾವತಿ, ಮಧುಸೂದನ್, ಯತೀಶ್, ಮಧುಕುಮಾರ್, ಎಂ.ಕೆ.ಗಣೇಶ್, ಅಬ್ದುಲ್ ಖಾದರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಬಿ. ಲೋಕೇಶ್ ಇದ್ದರು.