ಕುಶಾಲನಗರ, ಆ. ೧೪: ರಾಷ್ಟçದ ಕಳೆದು ಹೋದ ಭಾಗಗಳನ್ನು ಮತ್ತೆ ಒಂದುಗೂಡಿಸುವ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಿತು.
ಭಾರತಾಂಬೆಗೆ ಪೂಜೆ ಸಲ್ಲಿಕೆ ನಂತರ ಬಿಜೆಪಿ ಹಿರಿಯರಾದ ಜಿ.ಎಲ್. ನಾಗರಾಜ್ ಅವರು ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು.
ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಹೊರಟು ನಂತರ ಮುಖ್ಯ ರಸ್ತೆಯಲ್ಲಿ ತೆರಳಿ ಕಾರ್ಯಪ್ಪ ವೃತ್ತ, ಜನತಾ ಕಾಲೋನಿ, ಹಳೆ ಮಾರುಕಟ್ಟೆ ರಸ್ತೆ ದಾಟಿ ಆಂಜನೇಯ ದೇವಾಲಯ, ರಥಬೀದಿ ಮೂಲಕ ಸಾಗಿ ಪ್ರವಾಸಿ ಮಂದಿರದ ರಸ್ತೆಯಲ್ಲಿ ತೆರಳಿ ರೈತ ಸಹಕಾರ ಭವನಕ್ಕೆ ಸಾಗಿತು. ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.
ರೈತ ಸಹಕಾರ ಭವನದಲ್ಲಿ ಸಭಾ ಕಾರ್ಯಕ್ರಮ ನ್ಯಾಯಾಂಗ ಇಲಾಖೆಯ ನಿವೃತ್ತ ಅಧಿಕಾರಿ ಹಾ.ತಿ. ಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದು ಹಿಂದೂ ಜಾಗರಣಾ ವೇದಿಕೆಯ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ಉಡುಪಿಯ ಶ್ರೀಕಾಂತ್ ಶೆಟ್ಟಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಬೋರಲಿಂಗಯ್ಯ ಕುಶಾಲನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾರ್ಗದರ್ಶನದಲ್ಲಿ ಕುಶಾಲನಗರ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ಸೇರಿದಂತೆ ಇಬ್ಬರು ಡಿವೈಎಸ್ಪಿ ಪೊಲೀಸ್ ಸೇರಿದಂತೆ ಸುಮಾರು ೨೫೦ಕ್ಕೂ ಅಧಿಕ ಮಂದಿ
ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.