ಆಗಸ್ಟ್ ೧೫, ದೇಶ ಸ್ವತಂತ್ರ ದಿನದ ಆಚರಣೆಯ ಉನ್ಮಾದದಲ್ಲಿ ಇರುತ್ತದೆ. ಹಾಗೆ ಇರಬೇಕು ಕೂಡ, ಈ ದೇಶ ಪರಕೀಯರ ಹಿಡಿತದಿಂದ ಮುಕ್ತಿ ಪಡೆದ ಘಳಿಗೆಯನ್ನು ನೆನಪಿಸಿಕೊಳ್ಳುವುದು, ಹಾಗೆಯೇ ಆ ದಿನವನ್ನು ಸಂಭ್ರಮಿಸುವುದು ಪ್ರತಿಯೊಬ್ಬರ ಕರ್ತವ್ಯ ಕೂಡ ಆಗಬೇಕು.
ಆದರೆ ಪ್ರತಿ ಸಂಭ್ರಮದ ಹಿಂದೆ ಒಂದು ನೋವಿರುತ್ತದೆ; ಈ ನೋವನ್ನು ಸಹ ಒಂದು ಕ್ಷಣ ನೆನಪಿಸಿಕೊಳ್ಳಬೇಕು. ಹೇಗೆ ಸೂರ್ಯೋದಯದ ಮೊದಲು ಕತ್ತಲು ಕವಿದಿರುತ್ತದೋ ಹಾಗೆಯೇ ಸ್ವಾತಂತ್ರö್ಯದ ಬೆಳಕಿನ ಹಿಂದೆ ಘೋರ ಕತ್ತಲು ಸಹ ಇದೆ. ಆ ಘೋರ ಕತ್ತಲಿನಲ್ಲಿ ನಡೆದ ಪೈಶಾಚಿಕ ಕೃತ್ಯ ಒಮ್ಮೆ ನೆನಪಾಗಬೇಕು ಹೀಗೆ ನೆನಪಾದಾಗ ಮಾತ್ರ ಸ್ವಾತಂತ್ರ್ಯದ ಪಾವಿತ್ರ್ಯತೆ ಇನ್ನಷ್ಟು ಪಳಪಳಿಸುತ್ತದೆ.
ಸ್ವತಂತ್ರ ಹೋರಾಟದ ಒಳಗೆ ಸೇರಿಕೊಂಡ ಮಾನಸಿಕತೆಗಳು ಹೇಗೆ ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡವು, ಸ್ವತಂತ್ರ ಹೋರಾಟದ ದಿಕ್ಕನ್ನ ತಮ್ಮ ಸ್ವಾರ್ಥದ ಕಾರ್ಯಕ್ಕೆ ಬಳಸಿಕೊಂಡು ದೇಶವನ್ನು ಇಬ್ಭಾಗ ಮಾಡಿದವು. ಅಖಂಡವಾಗಿದ್ದ ಭಾರತ ತ್ರಿ ಖಂಡವಾಗಿ ಬದಲಾದ ದಿನ ಅಗಸ್ಟ್ ೧೪ ರ ದಿನ.
ನೈಸರ್ಗಿಕವಾಗಿ, ಸಾಂಸ್ಕೃತಿಕವಾಗಿ ಅಖಂಡವಾಗಿದ್ದ ಭಾರತವನ್ನು ಇಬ್ಭಾಗಿಸಿದ್ದು ಇಲ್ಲಿನ ಪ್ರಜೆಗಳಿಗೆ ಒಪ್ಪಿಗೆಯಿರಲಿಲ್ಲ. ಆದರೂ ಕೆಲವರ ಹಿತಾಸಕ್ತಿಗೆ ದೇಶ ತುಂಡಾಯಿತು. ಇಬ್ಭಾಗವಾದರೂ ಸಹ ಅದರಿಂದ ಆದ ಸಾವು, ನೋವುಗಳ ಸಂಖ್ಯೆ ಲೆಕ್ಕವಿಲ್ಲದಷ್ಟು. ಯಾರೋ ಮತ್ತಾರದ್ದೋ ಹಿತಾಸಕ್ತಿಗೆ ದೇಶವನ್ನು ನಾಲ್ಕು ಗೋಡೆಗಳ ಮಧ್ಯದಲ್ಲಿ ಕುಳಿತು ತುಂಡರಿಸಿದರು. ಆದರೆ ಇಲ್ಲಿ ನೂರಾರು ವರ್ಷಗಳಿಂದ ಬದುಕಿದ್ದ ಜನರ ಪರಿಸ್ಥಿತಿ ದೇವರಿಗೆ ಪ್ರೀತಿಯಾಗಿತ್ತು, ಸ್ಪಷ್ಟವಾಗಿ ಬಂದು ಕಾರಣಕ್ಕಾಗಿ ತುಂಡರಿಸಿದ ಕಾರಣದಿಂದ ಆ ಭಾಗದಲ್ಲಿ ವಾಸಿಸುತ್ತಿದ್ದ ಹಿಂದೂಗಳ ಮೇಲೆ ದಾಳಿಯಾಯಿತು. ಅದೆಷ್ಟೋ ಮನೆಗಳನ್ನು ದೋಚಲಾಯಿತು, ಪುರುಷರನ್ನು ಸಾರ್ವಜನಿಕವಾಗಿ ಹತ್ಯೆ ಮಾಡಲಾಯಿತು, ಗಂಡನ ಮುಂದೆ ಹೆಂಡತಿಯನ್ನು, ತಂದೆಯ ಮುಂದೆ ಮಗಳನ್ನೇ ಅತ್ಯಾಚಾರ ಮಾಡಿ ಕೊಲ್ಲಲಾಯಿತು, ಲೆಕ್ಕವಿಲ್ಲದಷ್ಟು ಯುವತಿಯರು ಕಣ್ಮರೆಯಾದರು, ಬಂಗಾಳದ ಮುಖ್ಯಮಂತ್ರಿಯಾಗಿದ್ದ ಸುಹ್ರಾವರ್ದಿಯವರು ನೇರವಾಗಿ ದಾಳಿಕೋರರ ಪರವಾಗಿ ನಿಂತರು. ಪೊಲೀಸ್ ಇಲಾಖೆಯಲ್ಲಿ ಇದ್ದ ಹಿಂದು ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಯಿತು. ನೇರವಾಗಿ ಸರ್ಕಾರ ಬಂಡುಕೋರರ ಪರವಾಗಿ ಕೆಲಸ ಮಾಡತೊಡಗಿತು. ಈ ಮಾನಸಿಕತೆ ದಾಳಿಕೋರರಿಗೆ ತಮ್ಮ ದೂರ್ತ ಕಾರ್ಯ ಮುಂದುವರೆಸಲು ಸಹಕಾರಿಯಾಯಿತು. ಸಾವಿರಾರು ಮನೆಗಳ ಮೇಲೆ ದಾಳಿಯಾಯಿತು. ಲೆಕ್ಕವಿಲ್ಲದಷ್ಟು ಕಗ್ಗೊಲೆಗಳಾದವು, ಈ ದಾಳಿಯಿಂದ ಮಹಾ ವಲಸೆ ಪ್ರಾರಂಭವಾಯಿತು. ತಮ್ಮ ಮನೆ ಆಸ್ತಿಯನ್ನೆಲ್ಲ ತೊರೆದ ಸಿಂದ್, ಪಂಜಾಬ್, ಬಂಗಾಳದ ಭಾಗದಲ್ಲಿ ಇದ್ದ ಹಿಂದೂಗಳು ಜೀವ ರಕ್ಷಣೆಗಾಗಿ ಭಾರತದ ಗಡಿಯತ್ತ ಧಾವಿಸತೊಡಗಿದರು. ಯಾವುದೇ ರಕ್ಷಣೆಯಿಲ್ಲದ ಇವರ ಮೇಲೆ ದಾಳಿ ಮಾಡಿದವರು. ಬರಿಗೈಯಲ್ಲಿ ಬರುತಿದ್ದ ಲಕ್ಷಾಂತರ ಜನರ ಮಾರಣ ಹೋಮ ಮಾಡಿದರು. ಪಾಕಿಸ್ಥಾನದಿಂದ ಬರುತಿದ್ದ ರೈಲುಗಳಲ್ಲಿ ಹೆಣಗಳ ರಾಶಿಯೇ ಬರುತಿತ್ತು.
ಅಲ್ಲಿ ದೇಶ ತೊರೆದು ಬಂದವರಿಗೆ ಈ ಭಾಗದಲ್ಲಿ ಪುನರ್ವಸತಿ ವ್ಯವಸ್ಥೆ ಸರಿಯಾಗಿ ಇರಲಿಲ್ಲ. ಸಾವಿರಾರು ಜನ ಸಾಂಕ್ರಾಮಿಕ ರೋಗಗಳಿಗೆ ಬಲಿಯಾದರು, ಸಾವಿರಾರು ವರ್ಷಗಳಿಂದ ಇದ್ದ ಅಖಂಡ ದೇಶವನ್ನು ಕೆಲವರ ಅಲೋಚನೆಗಾಗಿ ಬಲಿ ಕೊಡಲಾಯಿತು. ದೇಶ ತುಂಡರಿಸುವ ಪ್ರಸ್ತಾಪಗಳು ಬಂದಾಗ ಗಾಂಧಿ "ದೇಶ ತುಂಡರಿಸುವ ಮೊದಲು ನನ್ನದೇಹ ತುಂಡರಿಸಿ" ಎಂದಿದ್ದರು. ಆದರೆ ಕೊನೆಗೆ ಆದದ್ದು? ಮತೀಯ ಉನ್ಮಾದದ ಎದುರು ಗಾಂಧಿಯು ಮಂಡಿಯೂರಬೇಕಾಯಿತು. "ದೇಶ ವಿಭಜನೆ ಒಂದು ತಲೆತಿರುಕ ಕಲ್ಪನೆ, ಇದೊಂದು ಫೆಂಟಾಸ್ಟಿಕ್ ನಾನ್ ಸೆನ್ಸ್" ಎಂದಿದ್ದ ನೆಹರು ಅವರೇ ದೇಶ ವಿಭಜನೆಯ ಮುಂದಾಳತ್ವ ವಹಿಸಿದ್ದರು. ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ, ಪಾರಂಪರಿಕವಾಗಿ ಒಂದಾಗಿದ್ದ ಈ ರಾಷ್ಟç ಒಂದು ವರ್ಗದ ಚಿಂತನೆಗಾಗಿ, ಇಬ್ಭಾಗವಾಗಿತ್ತು. ಕೇವಲ ಇಬ್ಭಾಗವಷ್ಟೆ ಅಲ್ಲ, ಲಕ್ಷಾಂತರ ಜನರ ಮಾರಣ ಹೋಮಕ್ಕೆ ಕಾರಣವಾಯಿತು.
ಸ್ವತಂತ್ರ ದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸುವ ನಾವು ಈ ದಿನದ ಮೊದಲು ನಡೆದ ಮಾರಣ ಹೋಮ, ರಕ್ತದ ಓಕುಳಿಯನ್ನು ಮರೆಯಬಾರದು. ಪ್ರತಿ ವರ್ಷದ ಆಗಸ್ಟ್ ೧೪ ದೇಶವಾಸಿಗಳಿಗೆ ಕರಾಳ ದಿನವಾಗಬೇಕು. ಈ ದಿನ ಆ ವಿಷ ಘಳಿಗೆಯನ್ನು ಮೆಲುಕು ಹಾಕಬೇಕು. ಮೆಲುಕು ಹಾಕುವ ಉದ್ದೇಶ ಸ್ಪಷ್ಟವಾಗಿರಬೇಕು, ಮತ್ತೊಮ್ಮೆ ಈ ರೀತಿಯ ಘಟನೆ ಮರುಕಳಿಸಬಾರದು. ದೇಶ ಅಖಂಡವಾಗಿರಬೇಕು, ಸುಭದ್ರವಾಗಿರಬೇಕು. ದೇಶ ಉಳಿದರೆ ನಾವು' ನಮ್ಮ ಭವಿಷ್ಯ ಉಳಿದೀತು. ಯಾವ ದೇಶ ಇತಿಹಾಸವನ್ನು ಮರೆಯುತ್ತದೆಯೋ ಆ ದೇಶಕ್ಕೆ ಭವಿಷ್ಯ ಸಹ ಇಲ್ಲ. ಇದು ಸ್ಪಷ್ಟ.
"ಕರಾಳತೆಯನ್ನು ನೆನಪಿಸಿಕೊಂಡು ಸ್ವಾತಂತ್ರö್ಯದ ಸಂಭ್ರಮದಲ್ಲಿ ಭಾಗಿಯಾಗೋಣ"
-ರಜಿ, ತೋಳೂರು ಶೆಟ್ಟಳ್ಳಿ