ಮಡಿಕೇರಿ, ಆ. ೧೩: ಜಿಲ್ಲೆಯಲ್ಲಿ ಅಕ್ರಮ ಗಾಂಜಾ, ನಕಲಿ ಸಾರಾಯಿ, ಗೋಸಾಗಾಟ... ಹೀಗೆ ಇನ್ನಿತರ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ನಕಲಿ ಬಂದೂಕು ತಯಾರಿಕಾ ದಂಧೆ ಕೂಡ ನಡೆಯುತ್ತಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಈ ಪ್ರಕರಣವನ್ನು ಪತ್ತೆ ಹಚ್ಚಿರುವ ಪೊಲೀಸರು ನಕಲಿ ಬಂದೂಕು ತಯಾರಿಸುವ ವ್ಯಕ್ತಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಕೊಂಡಿರುವುದಲ್ಲದೆ, ಆರು ನಕಲಿ ಕೋವಿ ಹಾಗೂ ಪಿಸ್ತೊಲ್ ವಶಪಡಿಸಿ ಕೊಂಡಿದ್ದಾರೆ.
ಮೂಲತಃ ಕೇರಳ ನಿವಾಸಿ, ಅಯ್ಯಂಗೇರಿಯ ಕುಂಬೇರ ಅಂಗಡಿ ಜಂಕ್ಷನ್ ಬಳಿ ಕತ್ತಿ ಕೆಲಸ ಮಾಡುತ್ತಿದ್ದ ಸುರೇಶ್ ಎಂಬಾತನೇ ಬಂಧಿತ ವ್ಯಕ್ತಿ. ಕೇರಳದಿಂದ ಬಂದು ಇಲ್ಲಿ ಕತ್ತಿ ಕೆಲಸ ಮಾಡುತ್ತಿದ್ದ ಸುರೇಶ್ ಕತ್ತಿ ಕೆಲಸದೊಂದಿಗೆ ಅಕ್ರಮವಾಗಿ
ಕೋವಿ ಹಾಗೂ ಪಿಸ್ತೂಲ್ಗಳನ್ನು ತಯಾರಿ ಮಾಡುವಲ್ಲಿ ನಿಪುಣನಾಗಿದ್ದ. ತಾನು ತಯಾರು ಮಾಡಿದ ಕೋವಿಗಳನ್ನು ಕೊಡಗು ಹಾಗೂ ಕೇರಳದಲ್ಲಿ ಮಾರಾಟ ಮಾಡುತ್ತಿದ್ದ.
ಈ ಬಗ್ಗೆ ಕೆಲವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ವರಿಷ್ಠಾಧಿಕಾರಿಗಳ ಸೂಚನೆಯಂತೆ ನಕಲಿ ಕೋವಿ ತಯಾರಿ ಬಗ್ಗೆ ಜಾಡು ಹಿಡಿದು ಹೊರಟ ಭಾಗಮಂಡಲ ಪೊಲೀಸರು ಹಾಗೂ ಮಡಿಕೇರಿ ಪೊಲೀಸರಿಗೆ ಕರಿಕೆಯ ಚೆತ್ತುಕಾಯದ ಕುಂಡತ್ತಿಕಾನ ಗ್ರಾಮ ನಿವಾಸಿ, ಶಿವರಾಂ ಎಂಬವರು ಕೋವಿ ಖರೀದಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಅವರನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಸುರೇಶ್ ಎಂಬಾತನಿAದ ಕೋವಿ ಖರೀದಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.
ಇದೀಗ ಪೊಲೀಸರು ಸುರೇಶನನ್ನು ವಿಚಾರಣೆಗೆ ಒಳಪಡಿಸಿದ್ದು, ಆತನ ಮೇಲೆ ಹಲವು ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿವೆ. ಸದ್ಯದ ಮಟ್ಟಿಗೆ ಸುರೇಶ್ ಮಾರಾಟ ಮಾಡಿರುವ ಆರು ನಕಲಿ ಕೋವಿಗಳು ಹಾಗೂ ಒಂದು ಪಿಸ್ತೂಲನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ನೇತೃತ್ವದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
? ಸಂತೋಷ್